ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಚಿತ್ರದುರ್ಗ: ಕ್ರಿಕೆಟ್ ಬೆಟ್ಟಿಂಗ್ ಹೆಸರಲ್ಲಿ ಪತಿ ಮಾಡಿಕೊಂಡಿದ್ದ ಸಾಲದಿಂದ ಮನನೊಂದು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಬೆಳಕಿಗೆ ಬಂದಿದೆ. ಮಾರ್ಚ್ 18ರಂದು ಈ ಘಟನೆ ಜರುಗಿದೆ. ಈ ಪ್ರಕರಣದಲ್ಲಿ ಮಾನಸಿಕ ಕಿರುಕುಳ ನೀಡಿದ ಮತ್ತು ಮನೆ ಮುಂದೆ ಗಲಾಟೆ ಮಾಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹೊಳಲ್ಕೆರೆಯ ಬಸವ ಲೇಔಟ್ ನಿವಾಸಿ ರಂಜಿತಾ (24) ಎಂಬುವರೇ ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ. ಇವರ ಪತಿ ದರ್ಶನ್ ಬಾಲು ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇ) ಆಗಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 18ರಂದು ಸಂಜೆ 6-7ರ ಸುಮಾರಿಗೆ ಮನೆಯಲ್ಲೇ ರಂಜಿತಾ ಆತ್ಮಹತ್ಯೆಗೆ ಶರಣಾಗಿದ್ದರು.
ರಂಜಿತಾ ಆತ್ಮಹತ್ಯೆ ಸಂಬಂಧ ಆಕೆಯ ತಂದೆ ವೆಂಕಟೇಶ್ 13 ಮಂದಿ ವಿರುದ್ಧ ದೂರು ನೀಡಿದ್ದಾರೆ. ಮುಗ್ಧ ಸ್ವಭಾವದ ತಮ್ಮ ಅಳಿಯನ ಬಳಿ ಕಾಂಟ್ರಾಕ್ಟರ್ ಕೆಲಸ ಕೇಳಿಕೊಂಡು ಬಂದು ಪರಿಚಯ ಮಾಡಿಕೊಂಡ ಕೆಲವರು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡಲು ಪುಸಲಾಯಿಸಿದ್ದಾರೆ. ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸಬಹುದೆಂದು, ಖಾಲಿ ಚೆಕ್ ಕೊಟ್ಟರೆ ಸಾಕು ಎಂದು ಹೇಳಿಕೊಂಡಿದ್ದಾರೆ. ಬೆಟ್ಟಿಂಗ್ ಗೆದ್ದ ನಂತರ ಹಣ ವಾಪಸ್ ಕೊಡುತ್ತೇವೆ ಎಂದು ಪುಸಲಾಯಿಸಿ ಖಾಲಿ ಚೆಕ್ಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಬೆಟ್ಟಿಂಗ್ನಲ್ಲಿ ಸೋಲಾಗಿದ್ದು, ಚೆಕ್ಗಳನ್ನು ಬ್ಯಾಂಕಿಗೆ ಹಾಕುತ್ತೇವೆ ಎಂದು ಹಲವಾರು ಬಾರಿ ಹೆದರಿಸಿ ಮಾನಸಿಕ ಕಿರುಕುಳ ನೀಡಿರುತ್ತಾರೆ. ಕ್ರಿಕೆಟ್ ಬೆಟ್ಟಿಂಗ್ದಾರರ ಕಿರುಕುಳವೇ ನಮ್ಮ ಮಗಳ ಸಾವಿಗೆ ಕಾರಣವೆಂದು ದೂರಿನಲ್ಲಿ ವೆಂಕಟೇಶ್ ಉಲ್ಲೇಖಿಸಿದ್ದಾರೆ.
ಎಸ್ಪಿ ಪ್ರತಿಕ್ರಿಯೆ:''ಪತಿಯ ಸಾಲದ ವಿಷಯ ತಿಳಿದು ರಂಜಿತಾ ತುಂಬಾ ನೊಂದಿದ್ದರು. ಅಲ್ಲದೇ, ಎರಡ್ಮೂರು ಬಾರಿ ಇಬ್ಬರು - ಮೂವರು ಸಾಲದ ಹಣ ಕೇಳೋಕೆ ಬಂದು ಮನೆ ಮುಂದೆ ವಾಗ್ವಾದ ಮಾಡಿದ್ದರು. ಆದ್ದರಿಂದ ಮಾನಸಿಕ ಹಿಂಸೆಯಿಂದ ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ತಂದೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಾಗ ರಂಜಿತಾ ಪತಿ ದರ್ಶನ್ 12 ಜನರಿಂದ 84 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. 2021ರಿಂದ 23ರ ನಡುವೆ ಐಪಿಎಲ್, ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಅತಿಹೆಚ್ಚು ಹಣ ಕಳೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಮನೆ ಮುಂದೆ ಗಲಾಟೆ ಮಾಡಿದ್ದ ಶಿವು, ಗಿರೀಶ್ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪಾತ್ರದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ'' ಎಂದು ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ವಿವರಿಸಿದ್ದಾರೆ.
ಇದನ್ನೂ ಓದಿ:3 ಎಕರೆ ಜಮೀನು ಪೋಡಿಗೆ ₹3 ಲಕ್ಷ ಲಂಚ ಕೇಳಿದ ಸರ್ವೇಯರ್ ಲೋಕಾಯುಕ್ತ ಬಲೆಗೆ