ಬೆಂಗಳೂರು: ಮಗು ಹೊಂದುವ ವಿಚಾರದಲ್ಲಿ ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡು, ಆಕೆಯನ್ನ ಹತ್ಯೆಗೈದಿದ್ದ ಪತಿಯನ್ನು ಎಚ್ಎಎಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಎನ್.ಗಿರಿಜಾ (31) ಹತ್ಯೆಯಾದ ಪತ್ನಿ, ನವೀನ್ ಕುಮಾರ ಬಂಧಿತ ಆರೋಪಿ ಪತಿ.
8 ತಿಂಗಳುಗಳ ಹಿಂದಷ್ಟೆ ರಾಮನಗರ ಮೂಲದ ನವೀನ್ ಕುಮಾರ್ ಹಾಗೂ ಭಟ್ಕಳ ಮೂಲದ ಗಿರಿಜಾಗೆ ವಿವಾಹವಾಗಿತ್ತು. ಮೃತ ಗಿರಿಜಾ ಬ್ಯೂಟಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದರೆ, ನವೀನ್ ಕುಮಾರ್ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು. ಎರಡು ತಿಂಗಳ ಹಿಂದಷ್ಟೇ ಗರ್ಭಪಾತವಾಗಿದ್ದ ಗಿರಿಜಾ, ಮತ್ತೆ ಮಗುವನ್ನ ಹೊಂದಲು ಬಯಸಿದ್ದರು. ಇದಕ್ಕಾಗಿ ಪೀಡಿಸುವುದು ನವೀನ್ ಕುಮಾರ್ಗೆ ಇಷ್ಟವಿರಲಿಲ್ಲ. ಇದೇ ವಿಚಾರವಾಗಿ ಶುಕ್ರವಾರ ರಾತ್ರಿಯೂ ಇಬ್ಬರ ನಡುವೆ ಗಲಾಟೆ ಆರಂಭವಾದಾಗ ಕೋಪದಲ್ಲಿ ಪತ್ನಿಯ ಕತ್ತು ಹಿಸುಕಿ ಕೊಲೆಗೈದಿರುವುದಾಗಿ ಪೊಲೀಸರೆದುರು ನವೀನ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.