ಕರ್ನಾಟಕ

karnataka

ETV Bharat / state

ಮಂಗಳೂರು: ಮಾವನ ಮುಂದೆಯೇ ಪತ್ನಿಗೆ ತ್ರಿಪಲ್ ತಲಾಖ್ - ಪತಿ ಅರೆಸ್ಟ್ - TRIPLE TALAQ CASE

ಪತ್ನಿಗೆ ತ್ರಿಪಲ್ ತಲಾಖ್ ನೀಡಿದ ಆರೋಪಿಯನ್ನು ಮಂಗಳೂರಿನ ಮಹಿಳಾ ಠಾಣಾ ಪೊಲೀಸರು ಬಂಧನ ಮಾಡಿದ್ದಾರೆ.

husband arrest
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Nov 22, 2024, 10:42 PM IST

ಮಂಗಳೂರು:ಮಾನಸಿಕ ಕಿರುಕುಳ ನೀಡಿ ದೈಹಿಕವಾಗಿ ಹಲ್ಲೆ ನಡೆಸಿ ಪತ್ನಿಗೆ ತ್ರಿಪಲ್ ತಲಾಖ್ ನೀಡಿದ ಆರೋಪಿ ಪತಿಯನ್ನು ಮಂಗಳೂರಿನ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲ ಸಮ್ಮರ್ ಸ್ಯಾಂಡ್ ಹತ್ತಿರ ನಿವಾಸಿ ಮಹಮ್ಮದ್ ದಿಲ್ಫಾಜ್ ತ್ರಿವಳಿ ತಲಾಖ್ ನೀಡಿದ ಆರೋಪಿ. ಈತ ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಹೀನಾ ಫಾತಿಮಾ ಎಂಬಾಕೆಯನ್ನು 2019ರಲ್ಲಿ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮದುವೆಯ ಸಂದರ್ಭ ಹೀನಾ ಫಾತಿಮಾ ಮನೆಯವರು ಆಕೆಗೆ 22 ಪವನ್ ಚಿನ್ನ ಹಾಕಿದ್ದು, ಮೊಹಮ್ಮದ್ ದಿಲ್ಫಾಜ್‌ಗೆ ವಾಚ್ ಖರೀದಿಸಲು 50,000 ರೂ. ನೀಡಿದ್ದರು. ಮದುವೆಯಾದ ಬಳಿಕ ಮೊಹಮ್ಮದ್ ದಿಲ್ಫಾಜ್ ಪತ್ನಿಯೊಂದಿಗೆ ಸಂತೋಷದಿಂದಿದ್ದು, ಬಳಿಕ ಬೇರೆ ಅನ್ಯ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಲು ಆರಂಭಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ, ಪತ್ನಿ ವಿಚಾರಿಸಿದಾಗ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಪರಿಣಾಮ ಹೀನಾ ಫಾತಿಮಾ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬಳಿಕ ಕುಟುಂಬದ ಹಿರಿಯರು ಪಂಚಾಯಿತಿ ನಡೆಸಿ ಮೊಹಮ್ಮದ್ ದಿಲ್ಫಾಜ್‌ಗೆ ಬುದ್ಧಿ ಮಾತನ್ನು ಹೇಳಿದ್ದರು‌. ಆದರೂ ತನ್ನ ಚಾಳಿಯನ್ನು ಮುಂದುವರೆಸಿದ್ದಾನೆ‌. ನವೆಂಬರ್ 8ರಂದು ಈ ಬಗ್ಗೆ ಹೀನ ಫಾತಿಮಾ ತಂದೆ ಸಬೀಲ್ ಅಹಮ್ಮದ್ ಅವರು ಮೊಹಮ್ಮದ್ ದಿಲ್ಫಾಜ್‌ನಲ್ಲಿ ವಿಚಾರಿಸಿದ್ದಕ್ಕೆ ಆತ ಪತ್ನಿಗೆ ಹಲ್ಲೆ ನಡೆಸಿದ್ದಲ್ಲದೆ, ಪತ್ನಿಯ ತಂದೆಯನ್ನು ಮನೆಗೆ ಕರೆದು ಅವರ ಎದುರಿನಲ್ಲಿಯೇ ಪತ್ನಿ ಹೀನಾ ಫಾತಿಮಾಗೆ ಮೂರು ಬಾರಿ ತಲಾಖ್ ಹೇಳಿದ್ದಾನೆ‌. ಇನ್ನು ಮುಂದೆ ನೀನು ನನ್ನ ಪತ್ನಿಯಲ್ಲ ಎಂದು ಹೇಳಿ ಮನೆಯಿಂದ ಹೊರ ಹಾಕಿದ್ದಾನೆ ಎಂದು ದೂರು ನೀಡಲಾಗಿದೆ.

ಅಲ್ಲದೇ ಮೊಹಮ್ಮದ್ ದಿಲ್ಫಾಜ್‌ ತಂದೆ ಉಮರಬ್ಬ ಕೈತುಂಬಾ ವರದಕ್ಷಿಣೆ ಕೊಡಲಿಲ್ಲ, ಎಂದು ಹೀನ ಫಾತಿಮಾಗೆ ಆಗಾಗ ಮಾನಸಿಕ ಕಿರುಕುಳ ನೀಡುತ್ತಿದ್ದ. ಅಲ್ಲದೆ, ಅಜ್ಜಿ ತನ್ನ ಹೆಸರಿನಲ್ಲಿ ಹೂಡಿಕೆ ಮಾಡಿರುವ 50 ಸಾವಿರ ರೂ. ಮೆಚೂರ್ಡ್ ಆದರೆ ದೊರಕುವ 8,00,000 ರೂ. ಹಣವನ್ನು ಪತಿ ಹಾಗೂ ಪತಿಯ ತಂದೆಗೆ ನೀಡಬೇಕೆಂದು ಕಿರುಕುಳ ನೀಡಿರುತ್ತಾರೆ ಎಂದು ಹೀನ ಫಾತಿಮಾ ತನ್ನ ಪತಿ ಮೊಹಮ್ಮದ್ ದಿಲ್ಫಾಜ್‌ ಹಾಗೂ ಆತನ ತಂದೆ ಉಮರಬ್ಬ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಮೊಹಮ್ಮದ್ ದಿಲ್ಫಾಜ್‌ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಹೇರ್ ಡ್ರೈಯರ್‌ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌; ಪೊಲೀಸರು ಹೇಳಿದ್ದಿಷ್ಟು!

ABOUT THE AUTHOR

...view details