ಕರ್ನಾಟಕ

karnataka

ETV Bharat / state

ಹಾವೇರಿ: ಹುಕ್ಕೇರಿಮಠದ ಜಾನುವಾರು ಜಾತ್ರೆಗೆ ಚಾಲನೆ, ರಾಸುಗಳಿಗೆ ಚರ್ಮಗಂಟು ರೋಗದ ಲಸಿಕೆ - CATTLE FAIR

ರಾಸುಗಳಿಗೆ ಚರ್ಮಗಂಟು ರೋಗದ ಲಸಿಕೆ ಹಾಕುವ ಮೂಲಕ ಹುಕ್ಕೇರಿಮಠದ ಜಾನುವಾರು ಜಾತ್ರೆಗೆ ಇಂದು ಚಾಲನೆ ನೀಡಲಾಯಿತು.

ಹುಕ್ಕೇರಿಮಠದ ಜಾನುವಾರು ಜಾತ್ರೆಗೆ ಚಾಲನೆ
ಹುಕ್ಕೇರಿಮಠದ ಜಾನುವಾರು ಜಾತ್ರೆಗೆ ಚಾಲನೆ (ETV Bharat)

By ETV Bharat Karnataka Team

Published : Jan 6, 2025, 11:01 PM IST

ಹಾವೇರಿ: ಉತ್ತರ ಕರ್ನಾಟಕದ ಪ್ರಮುಖ ಜಾತ್ರೆ ಮತ್ತು ಆರಂಭಿಕ ಜಾತ್ರೆ ಎಂದು ಕರೆಸಿಕೊಳ್ಳುವ ಹಾವೇರಿ ಹುಕ್ಕೇರಿಮಠದ ಜಾತ್ರೆ ಭಾನುವಾರದಿಂದ ಆರಂಭವಾಗಿದೆ. ಜಾತ್ರೆಯ ಎರಡನೇಯ ದಿನವಾದ ಇಂದು ಜಾನುವಾರು ಜಾತ್ರೆಗೆ ಚಾಲನೆ ಸಿಕ್ಕಿತು.

ರಾಜ್ಯದಲ್ಲಿಯೇ ದೊಡ್ಡ ಜಾನುವಾರು ಮಾರುಕಟ್ಟೆಯಾಗಿರುವ ಹಾವೇರಿಯಲ್ಲಿ ವರ್ಷಪೂರ್ತಿ ಜಾನುವಾರುಗಳು ಸಿಗುತ್ತವೆ. ಕಳೆದ 54 ವರ್ಷಗಳಿಂದ ಹುಕ್ಕೇರಿಮಠ ಜಾನುವಾರು ಜಾತ್ರೆ ಆಯೋಜಿಸುತ್ತಾ ಬರುತ್ತಿದೆ. ಸದ್ಯ ಚರ್ಮಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆ ಜಾನುವಾರುಗಳಿಗೆ ಚರ್ಮಗಂಟು ರೋಗ ಲಸಿಕೆ ಹಾಕುವ ಮೂಲಕ ಜಾನುವಾರು ಜಾತ್ರೆಗೆ ಚಾಲನೆ ನೀಡಲಾಯಿತು. ಹುಕ್ಕೇರಿಮಠದ ಸದಾಶಿವಶ್ರೀಗಳು ಜಾನುವಾರು ಜಾತ್ರೆಗೆ ಚಾಲನೆ ನೀಡಿದರು.

ಹುಕ್ಕೇರಿಮಠದ ಜಾನುವಾರು ಜಾತ್ರೆಗೆ ಚಾಲನೆ (ETV Bharat)

ಪಶು ವೈದ್ಯಾಧಿಕಾರಿಗಳು ಜಾನುವಾರುಗಳಿಗೆ ಚರ್ಮಗಂಟು ರೋಗ ಸೇರಿದಂತೆ ವಿವಿಧ ರೋಗಗಳು ಕಾಡದಂತೆ ಲಸಿಕೆ ಹಾಕಿದರು. ನೂರಾರು ರೈತರು ತಮ್ಮ ಜಾನುವಾರುಗಳಿಗೆ ಚರ್ಮಗಂಟು ರೋಗ ನಿರೋಧಕ ಲಸಿಕೆ ಹಾಕಿಸಿದರು. ಮಠ ಮತ್ತು ಪಶುಸಂಗೋಪನಾ ಇಲಾಖೆಯ ಈ ಕಾರ್ಯಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಾವೇರಿ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ 2000ಕ್ಕೂ ಅಧಿಕ ಜಾನುವಾರುಗಳು ಚರ್ಮಗಂಟು ರೋಗದಿಂದ ಸಾವನ್ನಪ್ಪಿದ್ದವು. ರೈತರು ತಮ್ಮ ಎತ್ತುಗಳನ್ನು ರಕ್ಷಿಸಿಕೊಳ್ಳಲು ಪರದಾಡಿದ್ದರು. ಹೀಗಾಗಿ ಹುಕ್ಕೇರಿಮಠದ ಜಾತ್ರೆಯಲ್ಲಿ ಲಸಿಕೆ ಹಾಕುವ ಕಾರ್ಯವನ್ನು ಮಾಡಲಾಯಿತು. ಚರ್ಮಗಂಟು ರೋಗ ಹಿನ್ನೆಲೆ ಎತ್ತು ಮತ್ತು ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಲಾಗುತ್ತಿದೆ. ಮಠಗಳು ಈ ರೀತಿ ಜಾಗೃತಿ ಮೂಡಿಸಲು ಮುಂದಾದರೆ ರೋಗ ನಿಯಂತ್ರಣ ಮಾಡಬಹುದು. ಈ ನಿಟ್ಟಿನಲ್ಲಿ ಹುಕ್ಕೇರಿಮಠದ ಕಾರ್ಯ ಶ್ಲಾಘನೀಯ ಎಂದು ಅಧಿಕಾರಿಗಳು ತಿಳಿಸಿದರು.

ಉತ್ತರ ಕರ್ನಾಟಕದ ಸುದೀರ್ಘ ಜಾನುವಾರು ಜಾತ್ರೆ:ಹುಕ್ಕೇರಿಮಠ ಸದಾಶಿವಶ್ರೀಗಳು ಮಾತನಾಡಿ, "ಶಿವ ಬಸವೇಶ್ವರ ಜಾನುವಾರು ಜಾತ್ರೆ 54 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಾ ಬರುತ್ತಿದೆ. ಇದು ಉತ್ತರ ಕರ್ನಾಟಕದಲ್ಲಿ ಸುದೀರ್ಘವಾಗಿ 6 ತಿಂಗಳು ನಡೆಯುವ ಜಾನುವಾರು ಜಾತ್ರೆಯಾಗಿದೆ. ಇಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ, ಪ್ರದರ್ಶನ ಮತ್ತು ಚರ್ಮಗಂಟು ರೋಗಕ್ಕೆ ಲಸಿಕೆ ಹಾಕಲಾಗುತ್ತಿದೆ" ಎಂದರು.

ಪಶು ಸಂಗೋಪನಾ ಇಲಾಖೆ ನಿರ್ದೇಶಕರಾದ ಡಾ.ಎಸ್.ವಿ‌.ಸಂತಿ ಮಾತನಾಡಿ, "ಹುಕ್ಕೇರಿಮಠದ ಆಶ್ರಯದಲ್ಲಿ ಜಾನುವಾರು ಪ್ರದರ್ಶನ ಆಯೋಜಿಸಲಾಗಿದೆ. ಇಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗದ ಲಸಿಕೆ ಹಾಕುವ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಜೊತೆಗೆ ನೆಕ್ಕು ಬಿಲ್ಲೆಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಹಾಕಿಕೊಂಡಿದ್ದೇವೆ" ಎಂದು ತಿಳಿಸಿದರು.

ಇದನ್ನೂ ಓದಿ:ಖಾನಾಪುರದಲ್ಲಿದೆ ರಾಜ್ಯದಲ್ಲೇ ಮಾದರಿ ತೋಟಗಾರಿಕಾ ಕ್ಷೇತ್ರ: ವಿದೇಶಿ ಹಣ್ಣು, ಪಾಲಿಹೌಸ್​​ನಲ್ಲಿ ಅಂಜೂರ, ಮೆಣಸು ಪ್ರಯೋಗ

ABOUT THE AUTHOR

...view details