ಹುಬ್ಬಳ್ಳಿ:ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ರೌಡಿಗಳನ್ನು ಹುಬ್ಬಳ್ಳಿ-ಧಾರವಾಡ ನಗರದಿಂದ ಗಡಿಪಾರು ಮಾಡುವ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಳ್ಳುತ್ತಿದೆ. ಪ್ರಸ್ತುತ ಹುಬ್ಬಳ್ಳಿ ದಕ್ಷಿಣ ಉಪವಿಭಾಗದ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಓರ್ವ ರೌಡಿಶೀಟರ್‌ನನ್ನು ಗಡಿಪಾರು ಮಾಡಿ ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಆದೇಶ ಹೊರಡಿಸಿದ್ದಾರೆ.
ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿಯ ಮಂಟೂರ ರೋಡ ಮಿಲ್ಲತ್ ನಗರ ನಿವಾಸಿ 25 ವರ್ಷದ ರೌಡಿಶೀಟರ್ ಫಜಲ್ ಅಹ್ಮದ ತಂದೆ ತಾಜುದ್ದೀನ ಪುಣೆವಾಲೆ ಎಂಬಾತನನ್ನು ದಿನಾಂಕ ಫೆ.1 ರಿಂದ ಆರು ತಿಂಗಳ ಅವಧಿವರೆಗೆ ಬೀದರ್ ಜಿಲ್ಲೆಯ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಫಜಲ್ ವಿರುದ್ಧ ಹಲವು ಪ್ರಕರಣ ದಾಖಲು:ರೌಡಿಶೀಟರ್ ಫಜಲ್ ಎಲೆಕ್ಟ್ರಿಶಿಯನ್ ಉದ್ಯೋಗ ಮಾಡುತ್ತ ಬಡಜನರ ಮೇಲೆ ಹಲ್ಲೆ ಮಾಡುವುದು. ಕೂಲಿ, ಹಮಾಲಿ, ಸಣ್ಣಪುಟ್ಟ ವ್ಯಾಪಾರ ಮಾಡುವವರ ಮೇಲೆ ಗುಂಪು ಕಟ್ಟಿಕೊಂಡು ಹೊಡೆಯುತ್ತಿದ್ದ. ತನ್ನ ವಿರುದ್ಧ ಸಾಕ್ಷಿ ಹೇಳದಂತೆ ಬೆದರಿಸುತ್ತಿದ್ದ. ಅಕ್ರಮ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ತಿರುಗಾಡುತ್ತ ರೌಡಿಸಂ ತೋರಿಸುತ್ತ ಕೊಲೆಗೆ ಪ್ರಯತ್ನಿಸುತ್ತಿದ್ದ. ಅಲ್ಲದೆ, ಸಾರ್ವಜನಿಕರಲ್ಲಿ ಭಯದ ವಾತಾವರಣ ಹುಟ್ಟಿಸುವಂತಹ ಅಪರಾಧಗಳಲ್ಲಿ ತೊಡಗಿರುವ ಕುರಿತು ಈತನ ವಿರುದ್ಧ ಬೆಂಡಿಗೇರಿ, ವಿದ್ಯಾನಗರ, ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಸಹ ತೆರೆಯಲಾಗಿದೆ. ಆದರೂ ತನ್ನ ವರ್ತನೆ ಸುಧಾರಿಸಿಕೊಳ್ಳದೇ ಮತ್ತೆ ಕೊಲೆ ಯತ್ನ, ದೊಂಬಿ, ಹೊಡೆದಾಟ, ಮಾರಕಾಸ್ತ್ರ ಇಟ್ಟುಕೊಂಡು ಬೆದರಿಸುವಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರಿಸಿದ್ದರಿಂದ ಫಜಲ್ ಚಟುವಟಿಕೆ ಮೇಲೆ ನಿಗಾ ಇಡಲಾಗಿತ್ತು ಎಂದು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಯ್ದುಕೊಳ್ಳಲು ಮತ್ತು ಈತನ ಅಪರಾಧಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ 6 ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶಿಸಲಾಗಿದೆ. ಈ ಮೂಲಕ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಕಠಿಣ ಕ್ರಮದ ಸಂದೇಶವನ್ನು ನೀಡಲಾಗಿದೆ ಎಂದು ಪೊಲೀಸ್ ಕಮೀಷನರೇಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂಓದಿ:ಯುವತಿಯನ್ನು ರೇಗಿಸಬೇಡಿ ಎಂದವನ ಮೇಲೆ ಹಲ್ಲೆ: ನಾಲ್ವರು ಅಪ್ರಾಪ್ತರ ಬಂಧನ!