ಹುಬ್ಬಳ್ಳಿ: ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಚೆನ್ನಮ್ಮ ವೃತ್ತದ ಬಳಿಯ ಹಳೇ ಬಸ್ ನಿಲ್ದಾಣ ಉದ್ಘಾಟನೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಹೊಸ ರೂಪ ಪಡೆದ ಹಳೇ ಬಸ್ ನಿಲ್ದಾಣವನ್ನು ಜ.12 ರಂದು ಲೋಕಾರ್ಪಣೆಯಾಗಲಿದ್ದು, ಸ್ಮಾರ್ಟ್ ಸಿಟಿ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿ - ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ 42 ಕೋಟಿ ರೂ ವೆಚ್ಚದಲ್ಲಿ ಹಳೆಯ ಬಸ್ ನಿಲ್ದಾಣದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. 2022ರ ಜೂನ್ನಲ್ಲಿ ಪ್ರಾರಂಭವಾದ ಕಾಮಗಾರಿ ಆಗಸ್ಟ್ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು. ಆದರೆ, ಕಾರಣಾಂತರಗಳಿಂದ ಗಡುವನ್ನು ಡಿಸೆಂಬರ್ 2024 ರವರೆಗೆ ವಿಸ್ತರಿಸಲಾಗಿತ್ತು.
ಹೊಸ ರೂಪದಲ್ಲಿ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಉದ್ಘಾಟನೆಗೆ ಕೊನೆಗೂ ಮುಹೂರ್ತ ಫಿಕ್ಸ್ (ETV Bharat) ಈ ಟಿವಿ ಭಾರತ ಫಲಶೃತಿ: ಕಾಮಗಾರಿ ಪೂರ್ಣಗೊಂಡರೂ ಬಸ್ ನಿಲ್ದಾಣ ಉದ್ಘಾಟನೆ ಆಗದ ಹಿನ್ನೆಲೆ ಪ್ರಯಾಣಿಕರ ಪರದಾಟದ ಬಗ್ಗೆ ಈಟಿವಿ ಭಾರತ "ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಉದ್ಘಾಟನೆ ಯಾವಾಗ?: ಈ ಹಿಂದೆ ಇದ್ದ ಹಳೇ ಬಸ್ ಸ್ಟ್ಯಾಂಡೇ ಉತ್ತಮ ಅಂತಿರೋದೇಕೆ ಜನ?" ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು, ಕೊನೆಗೂ ಬಸ್ ನಿಲ್ದಾಣ ಉದ್ಘಾಟನೆಗೆ ಮುಂದಾಗಿದ್ದು, ಈಟಿವಿ ಭಾರತದ ವರದಿಗೆ ಫಲಶೃತಿ ಸಿಕ್ಕಂತಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ ಹೊಸ ಬಸ್ ನಿಲ್ದಾಣ ಉದ್ಘಾಟನೆ ಯಾವಾಗ?: ಹಳೇ ಬಸ್ ಸ್ಟ್ಯಾಂಡೇ ಉತ್ತಮ ಅಂತಿರೋದೇಕೆ ಜನ?
ಹಳೇ ಬಸ್ ನಿಲ್ದಾಣದ ವೈಶಿಷ್ಟ್ಯತೆ:
3 ಎಕರೆ 7 ಗುಂಟೆ ಜಾಗದಲ್ಲಿ 42 ಕೋಟಿ ರೂ ವೆಚ್ಚದಲ್ಲಿ ಈ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಮೊದಲನೇ ಹಂತದ ನೆಲಮಾಳಿಗೆ, ನೆಲ ಮಹಡಿ ಮತ್ತು 1ನೇ ಮಹಡಿ ಹೊಂದಿದೆ.
ಹೊಸ ರೂಪದಲ್ಲಿ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ (ETV Bharat) ಕಾರ್ಯ ನಿರ್ವಹಣೆ ಹೇಗಿರಲಿದೆ?: ಬಿಆರ್‌ಟಿಎಸ್ ಮತ್ತು ಸಿಟಿ ಬಸ್ ಸೇವೆ ನೆಲ ಮಹಡಿಯಿಂದ ನಿರ್ವಹಿಸಿದರೆ, ಉಪನಗರ ಸೇವೆಗಳು 1ನೇ ಮಹಡಿಯಿಂದ ಕಾರ್ಯನಿರ್ವಹಿಸುತ್ತವೆ. ನೆಲಮಾಳಿಗೆಯಲ್ಲಿ ಸುಮಾರು 100 ಬೈಕ್‌ಗಳು ಮತ್ತು 70 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ನೆಲ ಮಹಡಿಯನ್ನು ಬಿಆರ್‌ಟಿಎಸ್ ಹಾಗೂ ಸಿಟಿ ಬಸ್ಗಳಿಗೆ ಮೀಸಲಿಡಲಾಗಿದೆ. ಸಿಟಿ ಬಸ್ಗಾಗಿ 8 ಬೇಜ್ ಹಾಗೂ ಬಿಆರ್ಟಿಎಸ್ಗಾಗಿ 6 ಬೇಜ್ ಮಾಡಲಾಗಿದೆ. ಇಲ್ಲಿ 1,407 ಸ್ಕ್ವೇರ್ ಮೀಟರ್ ವಾಣಿಜ್ಯ ಮಳಿಗೆಗಳನ್ನು ಮಾಡಲಾಗಿದೆ.
ಹೊಸ ರೂಪದಲ್ಲಿ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ (ETV Bharat) ಇನ್ನು ಮೊದಲ ಮಹಡಿ ಸಾರಿಗೆ ಬಸ್ಗಾಗಿ ಮೀಸಲಿಡಲಾಗಿದ್ದು, ಕನಿಷ್ಠ 16 ಬಸ್ಗಳು ನಿಂತುಕೊಳ್ಳುವಷ್ಟು ವಿಶಾಲ ಜಾಗ ಇದೆ. ಜೊತೆಗೆ ಪ್ರತಿ ಮಹಡಿಯಲ್ಲೂ ಪುರುಷರು, ಮಹಿಳೆಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೊಸ ರೂಪದೊಂದಿಗೆ ತೆರೆದುಕೊಳ್ಳಲಿರುವ ಬಸ್ ನಿಲ್ದಾಣದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಹೊಸ ರೂಪದಲ್ಲಿ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ (ETV Bharat) ವೃದ್ಧರು ಹಾಗೂ ಮಕ್ಕಳಿಗೆ ಲಿಫ್ಟ್, ಎಕ್ಸಿಲೇಟರ್ ವ್ಯವಸ್ಥೆ:ವೃದ್ಧರು ಮತ್ತು ಮಕ್ಕಳಿಗಾಗಿ ಈ ಬಸ್ ನಿಲ್ದಾಣದಲ್ಲಿ 1 ಲಿಫ್ಟ್ ಹಾಗೂ 2 ಎಕ್ಸಿಲೇಟರ್ ಇದೆ. ವಾಣಿಜ್ಯ ಬಳಕೆಗೆ 20 ಸಾವಿರ ಚದರಡಿ ಜಾಗ ಮೀಸಲಿಡಲಾಗಿದೆ. ಇದೇ ಮೊದಲ ಬಾರಿಗೆ ಬಸ್ ನಿಲ್ದಾಣದಲ್ಲಿ ಸಣ್ಣ ಆಸ್ಪತ್ರೆ ನಿರ್ಮಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ವೈದ್ಯ ಸಿಬ್ಬಂದಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಎಲ್ಲ ರೀತಿಯಿಂದಲೂ ಸ್ಮಾರ್ಟ್ ಸಿಟಿಯಿಂದ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ (ETV Bharat) ಜ. 12 ರಂದು ಉದ್ಘಾಟನೆಗೆ ವೇದಿಕೆ ಸಿದ್ಧ:ನೂತನವಾಗಿ ನಿರ್ಮಿಸಿರುವ ಹಳೇ ಬಸ್ ನಿಲ್ದಾಣದಲ್ಲಿ ಉದ್ಘಾಟನಾ ಕಾರ್ಯಕ್ರಮವಿದೆ. ವೇದಿಕೆ ಸಿದ್ಧತೆ ಭರದಿಂದ ಸಾಗಿದೆ. ನಿಲ್ದಾಣದ ಮುಂಭಾಗದಲ್ಲಿ ರಸ್ತೆ ದುರಸ್ತಿ ಹಾಗೂ ಸ್ವಚ್ಛತೆ ಕೆಲಸ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಈ ಹೊಸ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸಭಾಪತಿ ಬಸವರಾಜ್ ಹೊರಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಶಾಸಕ ಮಹೇಶ ಟೆಂಗಿನಕಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಇದನ್ನೂ ಓದಿ: ಬಸ್ ಟಿಕೆಟ್ ದರ ಏರಿಕೆ - ಮಧ್ಯರಾತ್ರಿಯಿಂದಲೇ ಜಾರಿ: ಎಲ್ಲಿಗೆ ಎಷ್ಟು ದರ ತಿಳಿಯಿರಿ!
ಇದನ್ನೂ ಓದಿ:ಬಸ್ ಪ್ರಯಾಣ ದರ ಹೆಚ್ಚಳ : 'ಎಲ್ಲಾ ಏರಿಕೆ ಮಾಡಿದ್ರೆ ಇಳಿಕೆ ಯಾವಾಗ?' ದಾವಣಗೆರೆ ಜನರ ಆಕ್ರೋಶ