ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಮಹಾನಗರ ವ್ಯಾಪ್ತಿಯಲ್ಲಿ 63 ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ 60 ಯೋಜನೆಗಳು ಈಗಾಗಲೇ ಪೂರ್ಣಗೊಂಡಿದ್ದು, 3 ಯೋಜನೆಗಳಷ್ಟೇ ಬಾಕಿ ಉಳಿದಿವೆ.
ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ, ಸಾಯಿಮಂದಿರದ ಎದುರಿನ ಮಲ್ಟಿಲೆವಲ್ ಕಾರ್ ಪಾರ್ಕಿಂಗ್, ಲೋಹಿಯಾ ನಗರದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕೆಲಸ ಬಾಕಿ ಇದ್ದು, ಮಾರ್ಚ್ ತಿಂಗಳಾಂತ್ಯಕ್ಕೆ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳು ಉತ್ಸುಕರಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ ಮಾತನಾಡಿದರು. (ETV Bharat) ಉದ್ಘಾಟನಾ ಹಂತದ ಕಾಮಗಾರಿಗಳು:
ಹಳೇ ಬಸ್ ನಿಲ್ದಾಣ: ಚೆನ್ನಮ್ಮ ವೃತ್ತದ ಬಳಿಯ ಹಳೆ ಬಸ್ ನಿಲ್ದಾಣ ಕಾಮಗಾರಿ ಪೂರ್ಣ. ಇದನ್ನು 42 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಜ.12ರಂದು ಹಳೇ ಬಸ್ ನಿಲ್ದಾಣ ಉದ್ಘಾಟನೆ ಮಾಡಲಾಗುತ್ತಿದೆ.
ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್: ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಾಯಿಮಂದಿರದ ಎದುರು ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಾಮಗಾರಿ ನಡೆಯುತ್ತಿದೆ. ಸ್ಮಾರ್ಟ್ ಸಿಟಿಯಿಂದ 10 ಕೋಟಿ ರೂ ಹಾಗೂ ಖಾಸಗಿ ಕಂಪನಿಯವರಿಂದ 40 ಕೋಟಿ ಹಾಕಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಿಕೊಡಲಾಗುತ್ತಿದೆ. ಆದರೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, 2 ಕೋಟಿ ದಂಡವನ್ನು ಗುತ್ತಿಗೆದಾರರಿಗೆ ವಿಧಿಸಲಾಗಿದೆ. ಮಾರ್ಚ್ವರೆಗೆ ಕಾಲಾವಕಾಶ ನೀಡಲಾಗಿದ್ದು, ಅದರೊಳಗೆ ಕೆಲಸ ಪೂರ್ಣಗೊಳ್ಳುವುದಿಲ್ಲ. ಸ್ಮಾರ್ಟ್ ಸಿಟಿ ಯೋಜನೆ ಪೂರ್ಣಗೊಂಡ ಮೇಲೆ ಅವರು ಅದರ ನಿರ್ವಹಣೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋಹಿಯಾ ನಗರದ ಸ್ಪೋರ್ಟ್ಸ್ ಕಾಂಪ್ಲೆಕ್ಸ್:ಸುಮಾರು 160 ಕೋಟಿ ರೂ ವೆಚ್ಚದಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ. ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೊನೆಹಂತದ ಸಣ್ಣ ಪುಟ್ಟ ಕೆಲಸಗಳು ಮಾತ್ರ ಉಳಿದುಕೊಂಡಿವೆ. ಇದೂ ಕೂಡ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳುವ ಸಾಧ್ಯತೆ ಹೆಚ್ಚಿದೆ.
ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ''ಸ್ಮಾರ್ಟ್ ಸಿಟಿ ಕಾಮಗಾರಿ ಮುಗಿದ ತಕ್ಷಣ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಅಧಿಕೃತವಾಗಿ ಹಸ್ತಾಂತರ ಮಾಡಲಾಗುತ್ತದೆ. ಈಗಾಗಲೇ ಸ್ಮಾರ್ಟ್ ಸಿಟಿಯಿಂದ 45 ಯೋಜನೆಗಳನ್ನು ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಇಂಜಿನಿಯರ್ಗಳು ಇನ್ನುಳಿದ ಕೆಲ ಯೋಜನೆಗಳ ಹಸ್ತಾಂತರ ಪ್ರಕ್ರಿಯೆಯ ಪರಿಶೀಲನಾ ಹಂತ ನಡೆಸುತ್ತಿದ್ದಾರೆ. ಎಂಟು ಕಾಮಗಾರಿಗಳ ಕೊನೆಯ ಹಂತದ ಜಂಟಿ ಸಮೀಕ್ಷೆ ನಡೆಯುತ್ತಿದೆ. ಹಸ್ತಾಂತರ ಪತ್ರ ಕೈ ಸೇರಿದ ನಂತರ ಅವುಗಳನ್ನು ಪಾಲಿಕೆಗೆ ವಹಿಸಲಾಗುವುದು'' ಎಂದರು.
''ಯಾವ ಯಾವ ಯೋಜನೆಗಳನ್ನು ಯಾರಿಗೆ ಹಸ್ತಾಂತರಿಸಬೇಕು ಎಂಬುದು ನಿಗದಿಯಂತೆ ನಡೆಯುತ್ತದೆ. ಹಳೆ ಬಸ್ ನಿಲ್ದಾಣ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರವಾಗಲಿದೆ. ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಯಾರಿಗೆ ಹಸ್ತಾಂತರ ಮಾಡಬೇಕು ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಕೇಂದ್ರ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸೇರಿದಂತೆ ಬೋರ್ಡ್ ಚೇರ್ಮನ್ ಅವರು ಯಾವ ಇಲಾಖೆಗೆ ಹಸ್ತಾಂತರ ಮಾಡಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲಿದ್ದಾರೆ'' ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ:ನನೆಗುದಿಗೆ ಬಿದ್ದ ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಮಲ್ಟಿ - ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್: ಗುತ್ತಿಗೆದಾರನಿಗೆ ದಂಡ - MULTI LEVEL CAR PARKING COMPLEX
ಇದನ್ನೂ ಓದಿ:ಹುಬ್ಬಳ್ಳಿ ಹೊಸ ಬಸ್ ನಿಲ್ದಾಣ ಉದ್ಘಾಟನೆ ಯಾವಾಗ?: ಹಳೇ ಬಸ್ ಸ್ಟ್ಯಾಂಡೇ ಉತ್ತಮ ಅಂತಿರೋದೇಕೆ ಜನ? - HUBBALLI BUS STAND PROBLEMS