ಹುಬ್ಬಳ್ಳಿ/ವಿಜಯನಗರ:ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಕರೆ ನೀಡಿದ್ದ ಹುಬ್ಬಳ್ಳಿ-ಧಾರವಾಡ ಮತ್ತು ವಿಜನಗರ ಜಿಲ್ಲೆಯ ಕೂಡ್ಲಿಗಿ ಬಂದ್ ನಡೆಯಿತು.
ಹುಬ್ಬಳ್ಳಿ ಧಾರವಾಡದ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಸ್ ಮತ್ತಿತರ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಹಳೆ-ಹೊಸ ಬಸ್ ನಿಲ್ದಾಣ, ಹೊಸೂರು, ಹಳೇಹುಬ್ಬಳ್ಳಿ, ಗೋಕುಲ ರಸ್ತೆ, ಗಾಂಧಿ ಮಾರುಕಟ್ಟೆ ಸೇರಿ ಎಲ್ಲೆಡೆ ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿತ್ತು.
ಇನ್ನು ನಗರದ ಹೊರವಲಯದ ಗಬ್ಬೂರು, ಗದಗ ರಸ್ತೆ, ಕುಸುಗಲ್ ರಸ್ತೆಯಲ್ಲಿ ಲಾಂಗ್ ರೂಟ್ ಬಸ್ಸಗಳು ಸಂಚಾರ ಕಂಡುಬಂತು. ಇದನ್ನು ಹೊರತು ಪಡಿಸಿ ನಗರದಲ್ಲಿ ಯಾವುದೇ ಬಸ್ ಸಂಚಾರ ಇರಲಿಲ್ಲ.
ಬೆಳಗ್ಗೆ 6 ಗಂಟೆಯಿಂದಲೇ ಪ್ರತಿಭಟನಾಕಾರರು, ಚೆನ್ನಮ್ಮ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಅಮಿತ್ ಶಾ, ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತ ಡಾ.ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ತೆರಳಿದರು. ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಿದರು. ಬಳಿಕ ನಗರದಾದ್ಯಂತ ವಿವಿಧ ದಲಿತ ಪರ ಸಂಘಟನೆಗಳು ಬೈಕ್ ರ್ಯಾಲಿ, ಪ್ರತಿಭಟನಾ ಮೆರವಣಿಗೆ ನಡೆಸಿದವು.
ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿರ್ದೇಶನ ನೀಡಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಗೆ ಹುಬ್ಬಳ್ಳಿ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ, ವಿವಿಧ ದಲಿತ ಪರ ಸಂಘಟನೆಗಳು ಕರೆ ಕೊಟ್ಟಿದ್ದ ಹುಬ್ಬಳ್ಳಿ-ಧಾರವಾಡ ಬಂದ್ ಯಶಸ್ವಿಯಾಗಿದೆ. ಪಕ್ಷಾತೀತ, ಜಾತ್ಯಾತೀತವಾಗಿ ಬಂದ್ಗೆ ಬೆಂಬಲ ಕೊಡುವ ಮೂಲಕ ಅವಳಿ ನಗರದ ಜನ ಅಂಬೇಡ್ಕರ್ ಸರ್ವ ಜನಾಂಗದ ನಾಯಕ ಎಂಬುದನ್ನು ಸಾಬೀತು ಮಾಡಿದ್ದಾರೆ. ಅವಳಿ ನಗರದ ನಾಗರಿಕರು ಹಾಗೂ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಬಂದ್ ಮಾಡುವುದರ ಮೂಲಕ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದನ್ನು ಒಪ್ಪುವುದಿಲ್ಲ ಎಂಬ ಸಂದೇಶವನ್ನು ದೇಶಕ್ಕೆ ಕೊಟ್ಟಿದ್ದಾರೆ. ಬೆಜೆಪಿಯವರ ಮನಸ್ಥಿತಿ ಹೇಗಿದೆ ಎಂಬುದನ್ನು ತೋರಿಸುತ್ತದೆ. ಅಂಬೇಡ್ಕರ್ ನಮ್ಮ ಪ್ಯಾಷನ್ ಅಲ್ಲ. ನಮ್ಮ ಪ್ರಾಣ, ಉಸಿರು ಮತ್ತು ನಾಡಿಮಿಡಿತವಾಗಿದೆ ಎಂದರು.