ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ–ಪುಣೆ ವಂದೇ ಭಾರತ್‌ ರೈಲು ಸೇವೆ ಆರಂಭ: ಸ್ಮಾರ್ಟ್ ಬೋರ್ಡ್, ಟಚ್ ಸ್ಕ್ರೀನ್ ಅತ್ಯಾಧುನಿಕ ಸೌಕರ್ಯ; ಏನುಂಟು, ಏನಿಲ್ಲ! - Hubbali Pune Vande Bharat train - HUBBALI PUNE VANDE BHARAT TRAIN

ಹುಬ್ಬಳ್ಳಿ–ಪುಣೆ ನಡುವೆ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಇಂದು ತನ್ನ ಮೊದಲ ಸಂಚಾರ ನಡೆಸಿತು. ಮೊದಲ ಪ್ರಯಾಣ ಮಾಡಿದ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದರು. ಈ ಕುರಿತ ವರದಿ ಇಲ್ಲಿದೆ.

HUBBALI PUNE VANDE BHARAT TRAIN
ಹುಬ್ಬಳ್ಳಿ– ಪುಣೆ ವಂದೇ ಭಾರತ್‌ ರೈಲು ಸೇವೆ ಆರಂಭ (ETV Bharat)

By ETV Bharat Karnataka Team

Published : Sep 18, 2024, 4:32 PM IST

Updated : Sep 18, 2024, 7:36 PM IST

ಹುಬ್ಬಳ್ಳಿ–ಪುಣೆ ವಂದೇ ಭಾರತ್‌ ರೈಲು ಸೇವೆ ಆರಂಭ (ETV Bharat)

ಬೆಳಗಾವಿ:ಹುಬ್ಬಳ್ಳಿ–ಪುಣೆ ನಡುವೆ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರ ಆರಂಭಿಸಿದೆ. ಮಹಾರಾಷ್ಟ್ರದ ಪುಣೆಯಿಂದ ರಾತ್ರಿ 8.23ಕ್ಕೆ ಮೀರಜ್ ನಗರಕ್ಕೆ ಬಂದ ರೈಲನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಅತ್ಯಾಧುನಿಕ ಸೌಕರ್ಯ ಒಳಗೊಂಡ ಈ ರೈಲು ನಿಧಾನವಾಗಿ ನಿಲ್ದಾಣ ಪ್ರವೇಶ ಮಾಡುತ್ತಿದ್ದಂತೆ ಜನರಲ್ಲಿ ಹರ್ಷದ ಹೊನಲು ಹರಿಯಿತು. ಸಿಳ್ಳೆ, ಕೇಕೆ, ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು. ಭಾರತ್ ಮಾತಾ ಕಿ‌ ಜೈ, ಜೈ ಶ್ರೀರಾಮ್, ಮೋದಿ ಮೋದಿ ಎಂದು ಘೋಷಣೆ ಮೊಳಗಿಸಿದರು.

ವಂದೇ ಭಾರತ್‌ ರೈಲು (ETV Bharat)

ಎರಡು ತಾಸು ಮುಂಚಿತವಾಗಿಯೇ ನಿಲ್ದಾಣದಲ್ಲಿ ಸೇರಿದ್ದ ಜನ ಹೊಸ ರೈಲನ್ನು ಕಣ್ತುಂಬಿಕೊಂಡರು. ರೈಲಿನ ಎದುರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ‌ ಲೈವ್ ಮಾಡಿಕೊಂಡರು.

ವಂದೇ ಭಾರತ್‌ ರೈಲು ಸಿಬ್ಬಂದಿ (ETV Bharat)

ವಿಮಾನದಲ್ಲಿ ಹತ್ತಿದ ಅನುಭವ: ಇದು ರೈಲಲ್ಲ, ವಿಮಾನದಲ್ಲಿ ಹತ್ತಿದ ಅನುಭವ ಆಗುತ್ತಿದೆ. ಮೊದಲ ಬಾರಿಗೆ ಈ ರೈಲಿನಲ್ಲಿ ಪ್ರಯಾಣಿಸಿದ‌ ನನ್ನ ಅನುಭವಗಳು ಸಂಭ್ರಮದಿಂದ ಕೂಡಿವೆ. ಈ ನೆನಪನ್ನು ಫೋಟೋ ಫ್ರೇಮ್ ಮಾಡಿ‌ ಇಡುತ್ತೇನೆ ಎಂದು ಪ್ರಯಾಣಿಕರಾದ ವಿಜಯಾ ಹಿರೇಮಠ ತಮ್ಮ ಅನುಭವ ಹಂಚಿಕೊಂಡರು.

ರೈಲಿನಲ್ಲಿ ಊಟದ ವ್ಯವಸ್ಥೆ (ETV Bharat)

ಸ್ಮಾರ್ಟ್ ಬೋರ್ಡ್, ಸ್ಮಾರ್ಟ್ ಆಸನಗಳು, ಎಸಿ, ಸ್ಮಾರ್ಟ್ ಶೌಚಾಲಯ, ಮಾಹಿತಿ‌ ನೀಡಲು ಅತ್ಯಾಧುನಿಕ ಸೌಕರ್ಯ, ಟಚ್ ಸ್ಕ್ರೀನ್ ವ್ಯವಸ್ಥೆ ಹೊಂದಿದ ಬಾಗಿಲುಗಳು, ಸೆನ್ಸಾರ್ ಮೂಲಕ ತೆರೆದುಕೊಳ್ಳುವ ಬಾಗಿಲುಗಳು, ಸಮವಸ್ತ್ರ ಧರಿಸಿದ ಸಿಬ್ಬಂದಿ ಎಲ್ಲವೂ ಖುಷಿ ನೀಡುತ್ತದೆ' ಎಂದು ಮತ್ತೊಬ್ಬ ಪ್ರಯಾಣಿಕರಾದ ಸೀಮಾ ಜೋಶಿ ಹೇಳಿದರು.

ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಫಲವಾಗಿ ಈ ಕನಸು ನನಸಾಗಿದೆ. ಪುಣೆಯಿಂದ ಹುಬ್ಬಳ್ಳಿ ಮಾರ್ಗದಲ್ಲಿ ಸಂಚರಿಸುವ ಜನಸಂಖ್ಯೆ ದೊಡ್ಡದು. ಪುಣೆ-ಹುಬ್ಬಳ್ಳಿ ಮಧ್ಯದ ಪ್ರಯಾಣದ ಸಮಯವನ್ನು ಇದು ಕಡಿಮೆ ಮಾಡಿದೆ ಎಂದು ಪ್ರಯಾಣಿಕ ಸಂತೋಷ ಹಡಪದ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ರೈಲು ಸಂಚಾರಕ್ಕೆ ವರ್ಚ್ಯುವಲ್‌ ಮೂಲಕ ಚಾಲನೆ ನೀಡಿದರು. ಇಂದು (ಸೆ.18ರಂದು) ರೈಲು ಹುಬ್ಬಳ್ಳಿಯಿಂದ ಮತ್ತು ಸೆ.19ರಂದು ಪುಣೆಯಿಂದ ಮೊದಲ ವಾಣಿಜ್ಯ ಕಾರ್ಯಾಚರಣೆ ಆರಂಭಿಸಲಿದೆ. ರೈಲಿನಲ್ಲಿ ಎಂಟು ಬೋಗಿಗಳು ಇದ್ದು, ಅದರಲ್ಲಿ ಎಕ್ಸಿಕ್ಯೂಟಿವ್‌ ಕ್ಲಾಸ್‌ನ 52 ಆಸನಗಳು ಮತ್ತು 478 ಚೇರ್‌ ಕಾರ್ (ಸಿಸಿ) ಆಸನಗಳಿವೆ.

ಟಿಕೆಟ್​ ದರ ಎಷ್ಟು?: ಹುಬ್ಬಳ್ಳಿಯಿಂದ ಧಾರವಾಡವರೆಗಿನ ಚೇರ್ ಕಾರ್‌‌ (ಸಿಸಿ) ಪ್ರಯಾಣಕ್ಕೆ 365 ರೂ, ಎಕ್ಸಿಕ್ಯೂಟಿವ್ ಕ್ಲಾಸ್‌ (ಇಸಿ) ಪ್ರಯಾಣಕ್ಕೆ 690 ರೂ. ದರ ನಿಗದಿಪಡಿಸಲಾಗಿದೆ. ಹುಬ್ಬಳ್ಳಿಯಿಂದ ಬೆಳಗಾವಿಗೆ ಕ್ಯಾಟರಿಂಗ್ ಸೇರಿ ಚೇರ್ ಕಾರ್ ಪ್ರಯಾಣಕ್ಕೆ 520 ರೂ. ಎಕ್ಸಿಕ್ಯೂಟಿವ್. ಕ್ಲಾಸ್‌ಗೆ 1,005 ಮತ್ತು ಕ್ಯಾಟರಿಂಗ್ ಇಲ್ಲದೆ ಚೇರ್‌ ಕಾರ್‌ಗೆ 505 ರೂ. ಎಕ್ಸಿಕ್ಯೂಟಿವ್ ಕ್ಲಾಸ್‌ಗೆ 990 ರೂ. ದರ ಇದೆ. ಹುಬ್ಬಳ್ಳಿಯಿಂದ ಪುಣೆಗೆ ಕ್ಯಾಟರಿಂಗ್ ಶುಲ್ಕ ಸೇರಿ ಚೇರ್ ಕಾರ್‌ ಪ್ರಯಾಣಕ್ಕೆ 1,530 ರೂ. ಎಕ್ಸಿಕ್ಯೂಟಿವ್‌ ಕ್ಲಾಸ್‌ಗೆ 2,780 ಮತ್ತು ಕ್ಯಾಟರಿಂಗ್ ಇಲ್ಲದೆ ಚೇರ್‌ ಕಾರ್‌ 1,185 ರೂ. ಎ‌ಕ್ಸಿಕ್ಯೂಟಿವ್‌ ಕ್ಲಾಸ್‌ಗೆ 2,385 ರೂ. ದರ ನಿಗದಿಪಡಿಸಲಾಗಿದೆ.

ಹೀಗಿದೆ ಸಮಯ: ಬುಧವಾರ, ಶುಕ್ರವಾರ ಮತ್ತು ಭಾನುವಾರ ಹುಬ್ಬಳ್ಳಿಯ ಶ್ರೀಸಿದ್ಧಾರೂಢಸ್ವಾಮಿ ರೈಲು ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗೆ ಹೊರಡುವ ರೈಲು (20669), ಮಧ್ಯಾಹ್ನ 1.30ಕ್ಕೆ ಪುಣೆ ತಲುಪಲಿದೆ.

ಧಾರವಾಡ (ಬೆಳಗ್ಗೆ 5.15ರಿಂದ 5.17), ಬೆಳಗಾವಿ (ಬೆ.6.55 ರಿಂದ 7), ಮೀರಜ್‌ (ಬೆ.9 ರಿಂದ 9.05), ಸಾಂಗ್ಲಿ (ಬೆ.9.15ರಿಂದ 9.17), ಸತಾರಾದಲ್ಲಿ (ಬೆ.10.47ರಿಂದ 10.50) ನಿಲುಗಡೆ ಇರಲಿದೆ. ಪುಣೆಯಿಂದ (ರೈಲು ಸಂಖ್ಯೆ 20670) ಗುರುವಾರ, ಶನಿವಾರ ಮತ್ತು ಸೋಮವಾರ ಮಧ್ಯಾಹ್ನ 2.15ಕ್ಕೆ ಹೊರಡುವ ರೈಲು ರಾತ್ರಿ 10.45ಕ್ಕೆ ಹುಬ್ಬಳ್ಳಿ ತಲುಪಲಿದೆ. ಸತಾರ (ಸಂಜೆ 4.37ರಿಂದ 4.40), ಸಾಂಗ್ಲಿ (ಸಂಜೆ 6.10ರಿಂದ 6.12), ಮೀರಜ್ (ಸಂಜೆ 6.40ರಿಂದ 6.45), ಬೆಳಗಾವಿ (ರಾತ್ರಿ 8.35ರಿಂದ 8.40), ಧಾರವಾಡದಲ್ಲಿ (ರಾ. 10.20ರಿಂದ 10.22) ರೈಲು ನಿಲ್ಲಲಿದೆ.

ಇದನ್ನೂ ಓದಿ:ನಮೋ ಭಾರತ್​​ ರ‍್ಯಾಪಿಡ್​​ ರೈಲಾಗಿ ಬದಲಾದ ವಂದೇ ಮೆಟ್ರೋ; ಪ್ರಧಾನಿ ಮೋದಿಯಿಂದ ಚಾಲನೆ - ಏನೇನೆಲ್ಲ ವಿಶೇಷತೆ ಇದೆ? - Namo Bharat Rapid Rail

Last Updated : Sep 18, 2024, 7:36 PM IST

ABOUT THE AUTHOR

...view details