ಬೆಂಗಳೂರು: ಕುಂದಾನಗರಿ ಬೆಳಗಾವಿಯಲ್ಲಿ ಸೋಮವಾರದಿಂದ (ಡಿಸೆಂಬರ್ 9) ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಉಪ ಚುನಾವಣೆಯಲ್ಲಿ ಮೇಲುಗೈ ಸಾಧಿಸಿರುವ ಆಡಳಿತ ಪಕ್ಷ ಕಾಂಗ್ರೆಸ್ ಎದುರಾಳಿ ಬಿಜೆಪಿ – ಜೆಡಿಎಸ್ ಮೈತ್ರಿ ಕೂಟವನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿದೆ.
ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಭರ್ಜರಿ ಗೆಲುವಿನಿಂದ ಆಡಳಿತಾರೂಢ ಕಾಂಗ್ರೆಸ್ ಬೀಗುತ್ತಿದ್ದರೆ, ತನ್ನ ಆಂತರಿಕ ಕಚ್ಚಾಟದಿಂದಲೇ ಯುದ್ಧಕ್ಕೂ ಮುನ್ನ ಶಸ್ತ್ರತ್ಯಾಗ ಮಾಡಿದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಯತ್ನದಲ್ಲಿ ಬಿಜೆಪಿ - ಜೆಡಿಎಸ್ ಪಕ್ಷಗಳಿವೆ. ಪ್ರತಿಪಕ್ಷಗಳ ಬಳಿ ಇದ್ದ ಅಸ್ತ್ರಗಳೆಲ್ಲವೂ ಖಾಲಿಯಾದಂತಾಗಿದೆ. ಇಂತಹ ಹತ್ತು ಹಲವು ವೈರುಧ್ಯಗಳ ನಡುವೆಯೇ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತಿದೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಾದ ಮೂಲಭೂತ ಸೌಕರ್ಯಗಳ ಕೊರತೆಗೆ ಪರಿಹಾರ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಈ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳಿಗೆ ಸಾಕಷ್ಟು ಅಸ್ತ್ರಗಳಿದ್ದವು, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ, ಮುಡಾ ನಿವೇಶನ ಹಂಚಿಕೆ ಹಗರಣ, ವಕ್ಫ್ ಆಸ್ತಿ ವಿಚಾರ, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿಯರ ಸಾವು, ಸಚಿವ ಆರ್.ವಿ. ತಿಮ್ಮಾಪುರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳ ವಿರುದ್ಧ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷಗಳು ತುದಿಗಾಲಲ್ಲಿ ನಿಂತಿದ್ದವು. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಚಾಟಿ ಬೀಸಲು ವಿಪಕ್ಷಗಳು ತಯಾರಿ ನಡೆಸಿದ್ದವು.
ತಲೆನೋವು ತಂದ ಬಣ ಬಡಿದಾಟ:ಆದರೆ, ಇದೆಲ್ಲದರ ನಡುವೆ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವುದು ಪ್ರತಿಪಕ್ಷಗಳ ಜಂಘಾಬಲವನ್ನೇ ಹುದುಗಿಸಿದೆ. ಉಪಚುನಾವಣೆ ಫಲಿತಾಂಶದ ನಂತರ ಪ್ರತಿಪಕ್ಷ ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ಬಡಿದಾಟ ಹಾದಿ-ಬೀದಿ ರಂಪಾಟವಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಕೆಳಗಿಳಿಸುವಂತೆ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸುತ್ತಿದ್ದರೆ, ಯತ್ನಾಳ್ ಅವರನ್ನೇ ಪಕ್ಷದಿಂದ ಉಚ್ಛಾಟಿಸಬೇಕೆಂದು ಬಿ.ವೈ. ವಿಜಯೇಂದ್ರ ಬಣ ಪಟ್ಟು ಹಿಡಿದಿದೆ. ಈ ವಿಚಾರ ದೆಹಲಿಗೆ ತಲುಪಿದ್ದು, ಶನಿವಾರ ಬಿಜೆಪಿ ಕೋರ್ ಕಮಿಟಿ ಸಭೆ ಕೂಡ ನಡೆಸಲಾಗಿದೆ. ಎಲ್ಲವೂ ಸರಿಹೋಗುವ ವಿಶ್ವಾಸವನ್ನು ನಾಯಕರಲ್ಲಿ ಮೂಡಿಸಿದೆ.