ಬೆಂಗಳೂರು :ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಕರ್ನಾಟಕ ಕಂಡ ಡಿಗ್ನಿಫೈಡ್ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನು ಪಕ್ಷಾತೀತವಾಗಿ ಎಲ್ಲರೂ ಒಪ್ಪುವಂಥ ಮಾತು. ರಾಜಕಾರಣದಲ್ಲಿ ಎಷ್ಟೇ ಎತ್ತರಕ್ಕೆ ಸಾಗಿದರೂ ಸಾಮಾನ್ಯ ವ್ಯಕ್ತಿಯಲ್ಲಿರುವ ಅಭಿರುಚಿಗಳನ್ನು ಅವರು ಮರೆತಿರಲಿಲ್ಲ. ಹಾಗಾಗಿ, ಎಸ್. ಎಂ. ಕೃಷ್ಣ ಎಂದರೆ ನೆನಪಾಗುವುದು ಈ ವಿಷಯಗಳು.
ಅನುಕರಣೀಯ ವ್ಯಕ್ತಿತ್ವ ಓರ್ವ ಜನನಾಯಕನಾಗಿ ಎಸ್. ಎಂ. ಕೃಷ್ಣ ಅವರದ್ದು ಧೀಮಂತ ನಡೆ. ಉತ್ತಮ ಸಂಘಟನಾ ಚತುರ ಹಾಗೂ ವಾಕ್ಪಟು. ಏನೇ ಮಾತನಾಡಿದರೂ ಅಳೆದು ತೂಗಿ ಮಾತನಾಡುವುದು ಅವರಿಗೆ ಸಿದ್ಧಿಸಿತ್ತು. ಕನ್ನಡ, ಇಂಗ್ಲಿಷ್ ಸೇರಿದಂತೆ ಇತರೆ ಭಾಷೆಗಳ ಮೇಲೆ ಒಳ್ಳೆ ಹಿಡಿತವಿತ್ತು. ನಡೆ, ನುಡಿಗಳೆಲ್ಲದರಲ್ಲಿ ಅವರದ್ದು ಅನುಕರಣೀಯ ವ್ಯಕ್ತಿತ್ವ. ಹೆಚ್ಚು ಇಂಗ್ಲಿಷ್ ಪುಸ್ತಕಗಳನ್ನು ಓದುತ್ತಿದ್ದರು.
ಉತ್ತಮ ಡ್ರೆಸಿಂಗ್ ಸೆನ್ಸ್ ಇರುವ ರಾಜಕಾರಣಿಗಳು ಕಾಣಸಿಗುವುದು ಬಲು ಅಪರೂಪ. ಖಾದಿಯಾಗಲೀ, ಸೂಟ್ ಆಗಲೀ ಅಥವಾ ಪ್ಯಾಂಟು ಶರ್ಟ್ ಆಗಲಿ ತಮಗೆ ತುಂಬಾ ಒಪ್ಪುವ ಬಟ್ಟೆಗಳನ್ನೇ ಧರಿಸುತ್ತಿದ್ದರು ಎಸ್. ಎಂ ಕೃಷ್ಣ. ಬಟ್ಟೆ ವಿಚಾರದಲ್ಲಿ ಅವರು ತುಂಬಾ ಸೂಕ್ಷ್ಮತೆ ಹೊಂದಿದ್ದರು. ತಲೆಗೆ ವಿಗ್ ಸಹ ಅವರಿಗೆ ತುಂಬಾನೇ ಹೊಂದಿಕೊಂಡಿತ್ತು.
ವಿದ್ಯಾರ್ಥಿ ಭವನದ ದೋಸೆ ಕೃಷ್ಣ: ಗಾಂಧಿ ಬಜಾರ್ನಲ್ಲಿರುವ ವಿದ್ಯಾರ್ಥಿ ಭವನದ ದೋಸೆ ಕೃಷ್ಣ ಅವರಿಗೆ ಅಚ್ಚುಮೆಚ್ಚು. ಅವರಿಗೆ ಊಟದ ವಿಚಾರದಲ್ಲೂ ಒಳ್ಳೆಯ ಟೇಸ್ಟ್ ಇದೆ ಎಂಬುದು ಬಲ್ಲವರ ಮಾತು. ಸಿಎಂ ಆಗಿದ್ದಾಗ ಒಂದೆರಡು ಬಾರಿ ಬೆಂಗಳೂರು ಗಾಂಧಿ ಬಜಾರಿನ ವಿದ್ಯಾರ್ಥಿ ಭವನಕ್ಕೆ ಬಂದು ದೋಸೆ ಸವಿದು ಹಳೆಯ ನೆನಪುಗಳನ್ನು ಮೆಲುಕು ಹಾಕಿ ಹೋಗುತ್ತಿದ್ದರು. ಊಟದ ಅಭಿರುಚಿ ಬಗ್ಗೆ ಕರಾರುವಾಕ್ಕಾಗಿದ್ದ ಅವರು ವಿದ್ಯಾರ್ಥಿ ಭವನದಲ್ಲೊಮ್ಮೆ ದೋಸೆ ತಿಂದ ಮೇಲೆ ಎಣ್ಣೆ ಜಾಸ್ತಿ ಆಯ್ತು ಎಂದಿದ್ದರಂತೆ.
ಆಸೀಸ್ನ ಫ್ರಾಂಕ್ ಅಚ್ಚುಮೆಚ್ಚು:ಅಂದಹಾಗೆ, ಎಸ್.ಎಂ. ಕೃಷ್ಣ ಅವರು ಟೆನಿಸ್ ಪ್ರಿಯ. ಪ್ರತಿ ವರ್ಷ ಬರುವ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯನ್ನು ನೋಡಲು ಹೋಗುತ್ತಿದ್ದರು. ಆಸ್ಟ್ರೇಲಿಯಾದ ಟೆನಿಸ್ ಫ್ರಾಂಕ್ ಸೆಡ್ಮನ್ ಅವರ ನೆಚ್ಚಿನ ಆಟಗಾರ. ಬಿಡುವಿನ ವೇಳೆಯಲ್ಲಿ ಅವರು ಟೆನಿಸ್ ಅಂಗಳದಲ್ಲಿ ತಮ್ಮ ಪ್ರತಿಭೆ ತೋರುತ್ತಿದ್ದರು.
ಒತ್ತಡದ ನಡುವೆಯೂ ನಸುನಗು: ರಾಜಕೀಯ ಬದುಕಿನಲ್ಲಿ ಎಷ್ಟೇ ಒತ್ತಡವಿರಲಿ, ಎಷ್ಟೇ ಏರುಪೇರುಗಳಿರಲಿ ನಗುನಗುತ್ತಾ ಎಲ್ಲವನ್ನೂ ಎದುರಿಸುತ್ತಿದ್ದ ಕೃಷ್ಣ ಅವರು, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಗ ಹಾಸ್ಯ ಗೋಷ್ಠಿಗಳು ಜನಪ್ರಿಯತೆ ಗಳಿಸಿದ್ದವು. ಅವನ್ನು ಸವಿಯಲು ಆಸೆ ಪಡುತ್ತಿದ್ದ ಕೃಷ್ಣ ಅವರು ತಮ್ಮ ಪತ್ನಿ ಪ್ರೇಮಾ ಅವರೊಂದಿಗೆ ಹಲವಾರು ಹಾಸ್ಯಗೋಷ್ಠಿಗಳಿಗೆ ಆಕಸ್ಮಿಕವಾಗಿ ಹಾಜರಾಗಿರುವ ಉದಾಹರಣೆಗಳು ಇವೆ.
ಓದಿ:ಕಾವೇರಿ ವಿವಾದ ಸಮರ್ಥವಾಗಿ ನಿಭಾಯಿಸಿದ್ದ ಚತುರ: ತಮಿಳುನಾಡಿಗೆ ನೀರು ಬಿಡದೆ ಪಾದಯಾತ್ರೆ ನಡೆಸಿದ್ದ ಕೃಷ್ಣ