ಬೆಂಗಳೂರು:ತನ್ನ ಅಕ್ಕನ ಮನೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಹಣ, ಚಿನ್ನಾಭರಣ ದೋಚಿದ್ದ ತಂಗಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದು, 51 ಲಕ್ಷ ನಗದು ಹಾಗೂ 46 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ನಾಗದೇವನಹಳ್ಳಿಯ ಆರ್.ಆರ್.ಲೇಔಟ್ನಲ್ಲಿ ವಾಸವಾಗಿದ್ದ ಕುನ್ನೇಗೌಡ ಎಂಬವರು ನೀಡಿದ ದೂರಿನ ಮೇರೆಗೆ ನಾದಿನಿ ಉಮಾ (22) ಎಂಬಾಕೆಯನ್ನು ಬಂಧಿಸಲಾಗಿದೆ. ಲಗ್ಗೆರೆಯಲ್ಲಿ ವಾಸವಾಗಿದ್ದ ಉಮಾ ಕನ್ಸಲ್ಟೆಂಟ್ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಈಕೆಯ ಪೋಷಕರು ಕುಣಿಗಲ್ನ ಹುಲಿಯೂರುದುರ್ಗದಲ್ಲಿ ವಾಸವಿದ್ದಾರೆ. ಈಕೆ ತನ್ನ ಅಕ್ಕ ಸುಮಿತ್ರ ಜೊತೆಗೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು.
ಕಳೆದ ತಿಂಗಳು 22ರಂದು ಊರ ಹಬ್ಬದ ಪ್ರಯುಕ್ತ ಸುಮಿತ್ರ ಹಾಗೂ ಕುಟುಂಬದವರು ಊರಿಗೆ ಹೋಗಲು ಸಂಬಂಧಿಗೆ ಮನೆ ಕೀ ಕೊಟ್ಟು ರಾತ್ರಿ ಮಲಗುವಂತೆ ಸೂಚಿಸಿದ್ದರಂತೆ. ಹೀಗಾಗಿ ಸಂಬಂಧಿ 24ರಂದು ರಾತ್ರಿ ಮಲಗಲು ಹೋದಾಗ ಮನೆಯ ಬೀರು ಬಾಗಿಲು ತೆರೆದಿರುವುದು ಹಾಗೂ ಕೊಠಡಿಯಲ್ಲಿನ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿರುವುದನ್ನು ಗಮನಿಸಿ ಕಳ್ಳತನವಾಗಿರುವ ಬಗ್ಗೆ ತಿಳಿದುಬಂದಿತ್ತು. ಈ ಸಂಬಂಧ ವಿಷಯ ತಿಳಿದುಕೊಂಡು ಕುನ್ನೇಗೌಡ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.