ಬೆಂಗಳೂರು: ಸಾಲ ತೀರಿಸಲು ಅಪರಾಧ ಕೃತ್ಯಕ್ಕೆ ಕೈ ಹಾಕಿ ಯೂಟ್ಯೂಬ್ನಲ್ಲಿ ಕಳ್ಳತನ ಮಾಡುವ ರೀತಿ ತಿಳಿದುಕೊಂಡು ಮನೆಗಳ್ಳತನ ಮಾಡಿದ್ದ ಆರೋಪಿಯನ್ನು ಕೆ.ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಕೆ.ಪಿ.ಅಗ್ರಹಾರದ ಟೆಲಿಕಾಂ ಲೇಔಟ್ನ ಮದನ್ ಕುಮಾರ್ ಬಂಧಿತ ಆರೋಪಿಯಾಗಿದ್ದು, ಈತನಿಂದ 110 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೆಕ್ಯಾನಿಕ್ ಇಂಜಿನಿಯರ್ ಆಗಿದ್ದ ಮದನ್, ಅಲ್ಯುಮಿನಿಯಂ ಫ್ಯಾಕ್ಟರಿ ನಡೆಸುತ್ತಿದ್ದ. ದುರಾದೃಷ್ಟವಶಾತ್ ಈತನ ಫ್ಯಾಕ್ಟರಿಗೆ ಬೆಂಕಿ ಬಿದ್ದು ಸುಮಾರು 80 ಲಕ್ಷ ರೂ. ನಷ್ಟವಾಗಿತ್ತು.
ನಷ್ಟ ಭರಿಸಲು ಹಲವರಿಂದ ಸಾಲ ಮಾಡಿ ತೀರಿಸಲಾಗದೆ ಪರಿತಪಿಸುತ್ತಿದ್ದ. ಅಲ್ಲದೆ ನಷ್ಟ ಪರಿಹಾರ ರೂಪವಾಗಿ ವಿಮೆ ಕಂಪನಿಯು ಕೇವಲ 2 ಲಕ್ಷ ರೂ. ಪರಿಹಾರ ನೀಡಿ ಕೈ ತೊಳೆದುಕೊಂಡಿತ್ತು. ಲಕ್ಷಾಂತರ ರೂಪಾಯಿ ಸಾಲ ಜೊತೆಗೆ ಬಡ್ಡಿ ಹೆಚ್ಚಳವಾಗುತ್ತಿದ್ದಂತೆ ಸಾಲಗಾರರು ಈತನ ಹಿಂದೆ ಬಿದ್ದಿದ್ದರು. ಹೇಗಾದರೂ ಹಣ ಸಂಪಾದನೆ ಮಾಡಬೇಕೆಂಬ ಪಣ ತೊಟ್ಟ ಮದನ್, ಸಿನಿಮಾ, ವೆಬ್ ಸಿರೀಸ್ಗಳಿಂದ ಪ್ರೇರಿತನಾಗಿ ಕಳ್ಳತನ ಮಾಡಲು ತೀರ್ಮಾನಿಸಿದ್ದ. ಇದಕ್ಕಾಗಿ ಟೆಲಿಕಾಂ ಲೇಔಟ್ನಲ್ಲಿರುವ ಮನೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಸಿದ್ಧತೆ:ಕಳ್ಳತನ ಮಾಡಲು ಬೇಕಾದ ಸಿದ್ಧತೆ ಬಗ್ಗೆ ಯೂಟ್ಯೂಬ್ನಲ್ಲಿ ನೋಡಿದ್ದ ಮದನ್, ಕೃತ್ಯ ಎಸಗಲು ಬೇಕಾದ ವಸ್ತುಗಳಾದ ಕೈಗೆ ಗ್ಲೌಸ್, ಮರ ಕತ್ತರಿಸುವ ಯಂತ್ರವನ್ನ ಖರೀದಿಸಿದ್ದ. ಇದೇ ತಿಂಗಳು 17ರಂದು ಮನೆಯಲ್ಲಿ ಯಾರು ಇಲ್ಲದಿರುವಾಗ ನುಗ್ಗಿ ವುಡ್ಕಟರ್ ನಿಂದ ಬಾಗಿಲನ್ನು ಕೊರೆದು ಮನೆಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನ ಕಳ್ಳತನ ಮಾಡಿ ಪರಾರಿಯಾಗಿದ್ದ. ವಾಯುವಿಹಾರ ಮುಗಿಸಿ ಮನೆಗೆ ಮಾಲೀಕ ಬಂದು ನೋಡಿದಾಗ ಕಳ್ಳತನವಾಗಿರುವ ಸಂಗತಿ ಬೆಳಕಿಗೆ ಬಂದಿತ್ತು. ಈ ಸಂಬಂಧ ದೂರು ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನಿಂದ 110 ಗ್ರಾಂ ಚಿನ್ನ, 450 ಗ್ರಾಂ ಬೆಳ್ಳಿ ಹಾಗೂ 1.35 ಲಕ್ಷ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮಗುವಿಗೆ ಜನ್ಮ ನೀಡಿ ಪತ್ನಿ ಸಾವು: ಯೂಟ್ಯೂಬ್ ನೋಡಿ ಹೆರಿಗೆ ಮಾಡಿಸಿದ ಪತಿ- ಪೊಲೀಸರ ಶಂಕೆ
ಇತ್ತೀಚಿನ ಪ್ರಕರಣ, ಯೂಟ್ಯೂಬ್ ನೋಡಿ ಬೈಕ್ ಕಳ್ಳತನ:ಯೂಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡುತ್ತಿದ್ದ ಆಂಧ್ರ ಪ್ರದೇಶ ಮೂಲದ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಬಿಟೆಕ್ ಪದವಿ ಮುಗಿಸಿ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಕೆಲಸ ಸಿಗದ ಕಾರಣ ಯೂಟ್ಯೂಬ್ ನೋಡಿ ಕಳ್ಳತನದ ಹಾದಿ ಹಿಡಿದಿದ್ದರು.
ಇದನ್ನೂ ಓದಿ:ಪ್ರತ್ಯೇಕ ಪ್ರಕರಣ: ಪೇಂಟರ್ ₹6 ಲಕ್ಷದ ಚಿನ್ನ ಕದ್ದ; ಯೂಟ್ಯೂಬ್ ನೋಡಿ ಬೈಕ್ ಎಗರಿಸಿದ B.Tech ಪದವೀಧರರು ಸೆರೆ