ಬೆಂಗಳೂರು:ಮಹಾರಾಷ್ಟ್ರ, ಗುಜರಾತ್, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 150ಕ್ಕೂ ಅಧಿಕ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಬೆಂಗಳೂರಿನ ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೋಲ್ಹಾಪುರದ ಮಂಗಳವಾರ್ ಪೇಟ್ ಮೂಲದ ಪಂಚಾಕ್ಷರಿ ಸಂಗಯ್ಯ ಸ್ವಾಮಿ (37) ಬಂಧಿತ ಆರೋಪಿ. ಬಂಧಿತನಿಂದ 181 ಗ್ರಾಂ ತೂಕದ ಚಿನ್ನದ ಗಟ್ಟಿ, 333 ಗ್ರಾಂ ಬೆಳ್ಳಿಯ ವಸ್ತುಗಳು, ಚಿನ್ನ ಕರಗಿಸಲು ಬಳಸುತ್ತಿದ್ದ ಫೈರ್ ಗನ್ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ತಿಳಿಸಿದ್ದಾರೆ.
ಬಾಕ್ಸಿಂಗ್ ಬಿಟ್ಟು ಕಳ್ಳತನ :ಆರೋಪಿ ಪಂಚಾಕ್ಷರಿ ಸ್ವಾಮಿಯ ತಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ತಂದೆಯ ಸಾವಿನ ಬಳಿಕ ಅವರ ಕೆಲಸವನ್ನ ತಾಯಿಗೆ ನೀಡಲಾಗಿತ್ತು. ಬಾಕ್ಸಿಂಗ್ ಪಟುವಾಗಿದ್ದ ಪಂಚಾಕ್ಷರಿ ಸ್ವಾಮಿ, ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿಯೂ ಭಾಗವಹಿಸಿದ್ದರು. ಆದರೆ ಮದ್ಯಪಾನ ಹಾಗೂ ವಿಲಾಸಿ ಜೀವನದ ಗೀಳಿಗೆ ಬಿದ್ದು 2009ರಿಂದ ಪ್ರೊಫೆಷನಲ್ ಬಾಕ್ಸಿಂಗ್ ಬಿಟ್ಟು ಕಳ್ಳತನದ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ನೇಹಿತೆಗೆ ಐಷಾರಾಮಿ ಮನೆ ; 2016ರಲ್ಲಿ ಕೊಲ್ಕತ್ತಾದಲ್ಲಿರುವ ತನ್ನ ಸ್ನೇಹಿತೆಗಾಗಿ ಐಷಾರಾಮಿ ಮನೆ ಕಟ್ಟಿಸಿಕೊಟ್ಟಿದ್ದ. ಅಲ್ಲದೇ ಆಕೆಯ ಹುಟ್ಟುಹಬ್ಬಕ್ಕೆ ದುಬಾರಿ ಮೌಲ್ಯದ ಅಕ್ವೇರಿಯಂನ್ನು ಉಡುಗೊರೆಯಾಗಿ ನೀಡಿದ್ದ. ಆದರೆ, ಆರೋಪಿಯ ತಾಯಿಯ ಹೆಸರಿನಲ್ಲಿರುವ ವಾಸದ ಮನೆಯ ಮೇಲೆ ಸಾಲವಿದ್ದು, ಬ್ಯಾಂಕ್ನಿಂದ ನೋಟಿಸ್ ಸಹ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.