ಬೆಂಗಳೂರು:ಬೆಂಗಳೂರು ನಗರ ವಿಶ್ವವಿದ್ಯಾಲಯದ 3ನೇ ಘಟಿಕೋತ್ಸವದಲ್ಲಿ ಸಮಾಜ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಂ.ಆರ್. ಜೈರಾಮ್ ಮತ್ತು ವಿಶ್ವ ಪ್ರಸಿದ್ಧ ಕ್ರಿಕೆಟರ್ ಜಿ.ಆರ್. ವಿಶ್ವನಾಥ್ ಅವರುಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಶಿಕ್ಷಣವು ನಿಮ್ಮ ವೃತ್ತಿಜೀವನವನ್ನು ಯಶಸ್ವಿಗೊಳಿಸುವುದರ ಜೊತೆಗೆ ಜೀವನವನ್ನು ಅರ್ಥಪೂರ್ಣವಾಗಿಸುವಲ್ಲಿ ಸಹಾಯಕವಾಗುತ್ತದೆ. ಶಿಕ್ಷಣ ಮತ್ತು ಜ್ಞಾನವನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಜ್ಞಾನ ಹಂಚಿದಷ್ಟು ವೃದ್ಧಿಯಾಗಲಿದೆ. ನಮ್ಮ ಸಂಸ್ಕೃತಿ ಯಾವಾಗಲೂ ವಿಶ್ವ ಭ್ರಾತೃತ್ವ, ವಿಶ್ವ ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ. ದೇಶದ ಸಾಂಸ್ಕೃತಿಕ ಸಂಪ್ರದಾಯಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ಮತ್ತು ದೇಶದಲ್ಲಿ ಸಮಾನತೆ ಮತ್ತು ಸಾಮರಸ್ಯದ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವಲ್ಲಿ ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ಇದರಿಂದ ದೇಶದ ಏಕತೆ ಮತ್ತು ಸಮಗ್ರತೆಯು ಬಲಗೊಳ್ಳುತ್ತದೆ ಮತ್ತು ಅದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ವೇಗವಾಗಿ ಚಲಿಸುತ್ತದೆ ಎಂದು ಹೇಳಿದರು.
ಪ್ರಾಚೀನ ಕಾಲದಲ್ಲಿ, ನಮ್ಮ ದೇಶ ಭಾರತವನ್ನು ವಿಶ್ವ ಗುರು ಎಂದು ಕರೆಯಲಾಗುತ್ತಿತ್ತು. ನಳಂದ, ತಕ್ಷಶಿಲಾ, ವಿಕ್ರಮಶಿಲಾ ಮುಂತಾದವು ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳಿದ್ದವು. ನಳಂದಾ ವಿಶ್ವವಿದ್ಯಾನಿಲಯವು ಭಾರತದ ಶ್ರೀಮಂತ ಶೈಕ್ಷಣಿಕ ಪರಂಪರೆಯ ಸಂಕೇತವಾಗಿದೆ ಮತ್ತು ಜಾಗತಿಕ ಜ್ಞಾನ ಮತ್ತು ಸಂಸ್ಕೃತಿಗೆ ಕೊಡುಗೆಯಾಗಿದೆ. ನಳಂದ ವಿಶ್ವವಿದ್ಯಾನಿಲಯವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ, ನಳಂದ ಮಹಾವಿಹಾರದ ಬಳಿ ಕೆಲವು ಸಮಯದ ಹಿಂದೆ ಹೊಸ ನಳಂದ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಇದರ ಹೊಸ ಕ್ಯಾಂಪಸ್ ಅನ್ನು ದೇಶದ ಪ್ರಧಾನಿ ಉದ್ಘಾಟಿಸಿದ್ದಾರೆ ಎಂದು ತಿಳಿಸಿದರು.