ಬೆಂಗಳೂರು: ಮುಡಾ ಸೈಟುಗಳನ್ನು ವಾಪಸ್ ಮಾಡಿದ್ದು ಸ್ವಲ್ಪ ತಡವಾಗಿರಬಹುದು. ಒಮ್ಮೊಮ್ಮೆ ತಡವಾಗಿದ್ರೂ ನಿರ್ಧಾರ ಸರಿ ಇರುತ್ತೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಸಿಎಂ ಪತ್ನಿ ನಿವೇಶನ ವಾಪಸ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿಎಂ ಶ್ರೀಮತಿಯವರು ಸೈಟುಗಳನ್ನು ವಾಪಸ್ ಮಾಡಲು ಪತ್ರ ಬರೆದಿದ್ದಾರೆ. ಇದು ಕಾನೂನಾತ್ಮಕವಾಗಿ ಮುಂದೇನು ಆಗುತ್ತೆ ಅಂತ ನೋಡಬೇಕು. ಇದರಲ್ಲೂ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕ್ತಿದ್ದಾರೆ. ಸೈಟುಗಳನ್ನು ವಾಪಸ್ ಮಾಡಿದ್ದು ಸ್ವಲ್ಪ ತಡವಾಗಿರಬಹುದು. ಒಮ್ಮೊಮ್ಮೆ ತಡವಾಗಿದ್ರೂ ನಿರ್ಧಾರ ಸರಿ ಇರುತ್ತೆ ಎಂದರು.
ನಮ್ಮ 136 ಜನ ಶಾಸಕರೂ ಸಿಎಂ ಪರ ಒಟ್ಟಿಗೆ ನಿಲ್ತೀವಿ. ಕಾಂಗ್ರೆಸ್ ಪಕ್ಷ ಅವರ ಜತೆ ನಿಲ್ಲುತ್ತೆ. ಇದನ್ನು ಈಗಾಗಲೇ ಎಐಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ನಾವು ಅವರ ಜತೆ ನಿಲ್ಲುತ್ತೇವೆ ಎಂದು ಸಿದ್ದರಾಮಯ್ಯಗೆ ಬೆಂಬಲ ಸೂಚಿಸಿದರು.
ಬಿಜೆಪಿಯವರು ರಾಜಕೀಯ ಮಾಡ್ತಿದ್ದಾರೆ:ಇ.ಡಿ ಪ್ರಕರಣ ದಾಖಲಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಕೇಂದ್ರ ಇದನ್ನೊಂದು ಅಸ್ತ್ರವಾಗಿ ಉಪಯೋಗಿಸಿಕೊಳ್ತಿದೆ. ಮುಡಾ ಪ್ರಕರಣದಲ್ಲಿ ರಾಜಕೀಯ ಮಾಡ್ತಿದ್ದಾರೆ. ಇದು ನಮ್ಮ ಆರೋಪ ಆಗಿತ್ತು, ಈಗ ಇದು ಫ್ರೂವ್ ಆಗಿದೆ. ಮೋದಿಯವರೇ ಭಾಷಣದಲ್ಲಿ ಮುಡಾ ಬಗ್ಗೆ ಮಾತಾಡಿದ್ದಾರೆ. ಬಿಜೆಪಿಯು ದುರುದ್ದೇಶದಿಂದ ಇದನ್ನೆಲ್ಲ ಮಾಡಿಸುತ್ತಿದ್ದಾರೆ. ಇಡಿಯಿಂದ ತನಿಖೆ ಮಾಡಿಕೊಳ್ಳಲಿ ಎಂದರು.