ಕರ್ನಾಟಕ

karnataka

ETV Bharat / state

ಬಿಜೆಪಿ ಅವಧಿಯಲ್ಲೇ ರೈತರಿಗೆ ಹೆಚ್ಚು ವಕ್ಫ್ ನೋಟಿಸ್ ಜಾರಿ: ಸಚಿವ ಜಿ.ಪರಮೇಶ್ವರ್

ರೈತರಿಗೆ ಬಿಜೆಪಿ ಅವಧಿಯಲ್ಲೇ ಹೆಚ್ಚಾಗಿ ವಕ್ಫ್ ನೋಟಿಸ್ ಜಾರಿಯಾಗಿದೆ. ಬಿಜೆಪಿ ಅವಧಿಯಲ್ಲಿ 2,900 ಎಕರೆಗೆ ನೋಟಿಸ್ ನೀಡಿದ್ದರೆ, ಸದ್ಯ ಸಿದ್ದರಾಮಯ್ಯನವರ ಅವಧಿಯಲ್ಲಿ 300 ಎಕರೆಗೆ ನೋಟಿಸ್ ನೀಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

waqf notice Minister Parameshwar ವಕ್ಫ್ ನೋಟಿಸ್ ಸಚಿವ ಪರಮೇಶ್ವರ
ಸಚಿವ ಜಿ.ಪರಮೇಶ್ವರ್ (ETV Bharat)

By ETV Bharat Karnataka Team

Published : 5 hours ago

ಬೆಂಗಳೂರು:ಬಿಜೆಪಿ ಅವಧಿಯಲ್ಲಿ ಹೆಚ್ಚು ವಕ್ಫ್ ನೋಟಿಸ್ ಜಾರಿ ಮಾಡಿದ್ದಾರೆ. ರೈತರಿಗೆ ನಮ್ಮ ಸರ್ಕಾರದ ಮೇಲೆ ಮಾಡುತ್ತಿದ್ದ ಆಪಾದನೆಯ ಸತ್ಯ ಅರಿವಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.

ಸದಾಶಿವನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ಯವನ್ನು ಯಾವತ್ತೂ ಹೆಚ್ಚು ದಿನ ಮುಚ್ಚಿಡಲು ಆಗುವುದಿಲ್ಲ. ರೈತರಿಗೆ ನೋಟಿಸ್ ಕೊಟ್ಟಿದ್ದೇವೆ ಎಂದು ನಮ್ಮ ಸರ್ಕಾರದ ಮೇಲೆ ಆಪಾದನೆ ಮಾಡುತ್ತಿದ್ದರು. ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರೈತರಿಗೆ ಹೆಚ್ಚು ನೋಟಿಸ್ ನೀಡಲಾಗಿದೆ. ಈಗ ಬಿಜೆಪಿಯವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಕುಮಾರ ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ. ಸುಮಾರು 2,900 ಎಕರೆಗೆ ನೋಟಿಸ್ ನೀಡಿದ್ದಾರೆ. ಸಿದ್ದರಾಮಯ್ಯನವರ ಕಾಲದಲ್ಲಿ ಕೇವಲ 300 ಎಕರೆಗೆ ನೋಟಿಸ್ ನೀಡಲಾಗಿದೆ. ವಕ್ಫ್ ವಿಚಾರವನ್ನಿಟ್ಟುಕೊಂಡು ರಾಜ್ಯ ಸುತ್ತಲು ಹೊರಟಿರುವ ಬಿಜೆಪಿ ನಾಯಕರು, ಯಾರು ಜಾಸ್ತಿ ನೋಟಿಸ್ ನೀಡಿದ್ದು? ಯಾರ ಮೇಲೆ‌ ಆಪಾದನೆ ಮಾಡಬೇಕು? ಎಂಬುದನ್ನು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಕ್ಫ್ ವಿಚಾರದಲ್ಲಿ ಬಿಜೆಪಿಯವರಿಗೆ ಮುಖಭಂಗ ಮಾಡಲು ಹೋರಾಟಕ್ಕೆ ಮುಂದಾಗಿದ್ದಾರೆ. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಹೆಚ್ಚು ನೋಟಿಸ್ ಕೊಟ್ಟಿರುವುದು ಗೊತ್ತಾಗಿಯೇ ಬಿಜೆಪಿಯವರಿಗೆ ಮುಜುಗರ ಮಾಡಲು ಹೋರಾಟ ಮಾಡುತ್ತಿದ್ದಾರೆ ಎಂದು ಕುಟುಕಿದರು.

ನಾವು ವಿರೋಧ ಪಕ್ಷದಲ್ಲಿದ್ದಾಗ ರೈತರಿಗೆ ನೋಟಿಸ್ ನೀಡಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಹಾಗಾಗಿ ನಾವು ಆ ವಿಚಾರವನ್ನು ಕೈಗೆತ್ತಿಕೊಂಡಿಲ್ಲ. ಈಗ ನಮ್ಮ ಗಮನಕ್ಕೆ ಬಂದಿದೆ. ಎಚ್ಚರಿಕೆ ವಹಿಸಿಕೊಂಡು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಗೆದ್ದರೆ ಜನಾದೇಶ,‌ ಸೋತರೆ ಇವಿಎಂ ದೋಷ ಎಂಬ ಸಿ.ಟಿ.ರವಿ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಮೊದಲಿಂದಲೂ ಹೇಳುತ್ತಿದ್ದೇವೆ, ಗೆದ್ದಾಗಲೂ ಹೇಳಿದ್ದೇವೆ. ನಾನು ಹೇಳಿದ್ದು ಏನು ಅಂತ ಸರಿಯಾಗಿ ಅರ್ಥಮಾಡಿಕೊಳ್ಳಲಿ. ಇವಿಎಂ ದುರ್ಬಳಕೆ ಸೆಲೆಕ್ಟಿವ್ ಆಗಿ ಮಾಡುತ್ತಾರೆ. ಸೆಲೆಕ್ಟೀವ್ ಆಗಿ ರಾಜ್ಯ ಆಯ್ಕೆ ಮಾಡುತ್ತಾರೆ, ಸೆಲೆಕ್ಟಿವ್ ಆಗಿ ಕ್ಷೇತ್ರ ಆಯ್ಕೆ ಮಾಡುತ್ತಾರೆ ಅಂತ ಹೇಳಿದ್ದೇವೆ. ನಾವು ಹೊಸದಾಗಿ ಹೇಳುತ್ತಿಲ್ಲ ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ ಎಂದರು.

2014ರ ನಂತರ ಬಂದ ಚುನಾವಣೆಗಳಲ್ಲಿ ಇವಿಎಂ ಹ್ಯಾಕ್ ಮಾಡಿದ್ದಾರೆ ಅಂತ ಹೇಳಿದ್ದೇವೆ. ಕೇವಲ ನಾನೊಬ್ಬನೇ ಹೇಳಿದ್ದರೆ ತಪ್ಪಾಗಬಹುದು. ಇಡೀ ದೇಶದಲ್ಲಿ ಜನ ಹೇಳುತ್ತಿದ್ದಾರೆ. ಮಹಾರಾಷ್ಟ್ರದ ಎಲೆಕ್ಷನ್‌ನಲ್ಲೂ ವಿಶ್ಲೇಷಣೆ ಮಾಡುವಾಗ ಆ ರೀತಿಯಾದ ಚರ್ಚೆ ಆಗಿದೆ ಅಂತ ಹೇಳಿದ್ದೇನೆ. ಸಿ.ಟಿ.ರವಿಗೆ ಅರ್ಥ ಮಾಡಿಕೊಳ್ಳೋಕೆ ಆಗಿಲ್ಲ ಎಂದು ತಿರುಗೇಟು ನೀಡಿದರು.

ಸರ್ಕಾರ ಸುಭದ್ರ: ನಮಗೆ ಟಾಸ್ಕ್ ಕೊಟ್ಟರೆ ಒಂದು ತಿಂಗಳಲ್ಲಿ ಜೆಡಿಎಸ್ ಶಾಸಕರನ್ನ ಕಾಂಗ್ರೆಸ್‌ಗೆ ಕರೆದುಕೊಂಡು ಬರುತ್ತೇನೆ ಎಂಬ ಸಿ.ಪಿ.ಯೋಗೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅದರ ಅಗತ್ಯ ನಮಗೆ ಇಲ್ಲ. ಸಾಮಾನ್ಯವಾಗಿ ಕಾಂಗ್ರೆಸ್‌ನಲ್ಲಿ ಬಿಜೆಪಿಯವರು ಮಾಡಿದ ಹಾಗೆ ಆಪರೇಷನ್ ಕಮಲ ಮಾಡಲ್ಲ. ಆ ರೀತಿ ನಾವು ಮಾಡಲು ಹೋಗುವುದಿಲ್ಲ. ಈಗ ಯೋಗೇಶ್ವರ್ ಆ ಮಾತು ಹೇಳಿದ್ದರೆ, ಅದರ ಅಗತ್ಯತೆ ನಮಗೆ ಇಲ್ಲ. 138 ಜನ ಶಾಸಕರಿದ್ದೇವೆ. ಸರ್ಕಾರ ಸುಭದ್ರವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ವಕ್ಫ್ ಮಂಡಳಿಯಿಂದ ವಿವಾಹ ನೋಂದಣಿ ಪ್ರಮಾಣಪತ್ರ ವಿತರಣೆ ಆದೇಶಕ್ಕೆ ಹೈಕೋರ್ಟ್ ತಡೆ

ABOUT THE AUTHOR

...view details