ಬೆಂಗಳೂರು:ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯಿಂದ ಸರ್ಕಾರ ಸ್ವಲ್ಪಮಟ್ಟಿಗೆ ಶೇಕ್ ಆಗಿರುವುದು ನಿಜ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು.
ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ಗೆ ಅನುಮತಿಯಿಂದ ಸರ್ಕಾರ ಸ್ವಲ್ಪಮಟ್ಟಿಗೆ ಶೇಕ್ ಆಗಿದೆ. ಇಲ್ಲ ಅಂತ ಹೇಳಿದರೆ ನಾನು ಸುಳ್ಳು ಹೇಳಿದಂತಾಗುತ್ತದೆ. ಇದನ್ನು ನಾವು ಸರಿಪಡಿಸಿಕೊಂಡು ಆಡಳಿತ ಮುಂದುವರೆಸುತ್ತೇವೆ. ಸಂಪುಟ ಸಭೆಯಲ್ಲೂ ನಾವ್ಯಾರೂ ಬಿಜೆಪಿ ಹುನ್ನಾರಕ್ಕೆ ಬಲಿಯಾಗೋದು ಬೇಡ, ಆಡಳಿತ ಮಾಡಿಕೊಂಡು ಹೋಗೋಣ ಅಂತ ತೀರ್ಮಾನಿಸಿದ್ದೇವೆ. ಕಾನೂನು ಸಮರ ಮುಂದುವರೆಸಿಕೊಂಡೇ ಆಡಳಿತ ನಡೆಸಲಾಗುವುದು'' ಎಂದರು.
''ಇಡೀ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ರಾಜ್ಯಪಾಲರು ರಾಜಕೀಯ ಕಾರಣಕ್ಕೆ ಇದನ್ನೆಲ್ಲ ಮಾಡುತ್ತಿದ್ದಾರೆ. ರಾಜ್ಯಪಾಲರ ಕಚೇರಿಯನ್ನು ಸಹ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಾವು ಕಾನೂನು ಹಾಗೂ ರಾಜಕೀಯ ಹೋರಾಟ ಮಾಡಲು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಜಿಲ್ಲೆ, ತಾಲೂಕುಗಳಲ್ಲಿ ನಮ್ಮ ಕಾರ್ಯಕರ್ತರು ಹೋರಾಟಕ್ಕೆ ಇಳಿಯುವ ಅನಿವಾರ್ಯತೆ ಬಂದಿದೆ. ಅವರಿಗೆ ರಾಜಕೀಯ ಉತ್ತರ ಕೊಡಲು ರಾಜಕೀಯ ಹೋರಾಟವೇ ಮಾಡಬೇಕು. ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷರು ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸಲು ಕರೆ ಕೊಟ್ಟಿದ್ದಾರೆ. ನಾಳೆಯಿಂದ ರಾಜ್ಯದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ'' ಎಂದು ತಿಳಿಸಿದರು.
''ಮುಡಾ ತನಿಖೆಯನ್ನು ನ್ಯಾಯಾಲಯವು ಯಾರಿಗೆ ನೀಡುತ್ತದೆಯೋ ಗೊತ್ತಿಲ್ಲ. ಈ ಸಂದರ್ಭದಲ್ಲಿ ಅವರಿಗೆ ಇರುವ ಆಯ್ಕೆ ಲೋಕಾಯುಕ್ತ ಮಾತ್ರ. ಲೋಕಾಯುಕ್ತದಲ್ಲೇ ಅರ್ಜಿದಾರರು ದೂರು ಕೊಟ್ಟಿರುವುದರಿಂದ ತನಿಖೆಯನ್ನೂ ಲೋಕಾಯುಕ್ತಕ್ಕೇ ಕೊಡುವ ಸಾಧ್ಯತೆ ಇದೆ'' ಎಂದು ಮಾಹಿತಿ ನೀಡಿದರು.
ದಾಖಲೆಯಿಲ್ಲದೇ ಪ್ರಾಸಿಕ್ಯೂಷನ್ಗೆ ಅನುಮತಿ: ''ಪ್ರಾಸಿಕ್ಯೂಷನ್ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯ ಸೆಕ್ಷನ್ 17ಎ ಅಡಿ ಯಾರ್ಯಾರಿಗೆ ಹೇಗೆ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಕೇಂದ್ರವೇ ವ್ಯಾಖ್ಯಾನಿಸಿದೆ. ಸಿಎಂಗೆ ಯಾರು, ಸಚಿವರಿಗೆ ಯಾರು ಅನುಮತಿ ಕೇಳಬೇಕು ಅಂತ ಕೇಂದ್ರದ ಮಾರ್ಗಸೂಚಿ ಇದೆ. ಸಿಎಂಗೆ ಡಿಜಿಪಿ ತನಿಖೆಗೆ ಅನುಮತಿ ಕೇಳಬೇಕು ಅಂತ ಇದೆ. ರಾಜ್ಯಪಾಲರು ಇದ್ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಇನ್ನೊಂದು ಕಡೆ, ದಾಖಲೆ ಇಲ್ಲದೇ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ. ನಮ್ಮ ಸಚಿವ ಸಂಪುಟದ ತೀರ್ಮಾನವನ್ನೂ ತಿರಸ್ಕರಿಸಿದ್ದಾರೆ'' ಎಂದು ತಿಳಿಸಿದರು.