ಬೆಂಗಳೂರು: "ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ. ದೆಹಲಿಯಲ್ಲಿ ಸಿಎಂ, ಡಿಸಿಎಂ ಚರ್ಚೆ ಮಾಡಿ ಏನು ತೀರ್ಮಾನ ಮಾಡ್ಕೊಂಡು ಬರ್ತಾರೆ ಅಂತ ಗೊತ್ತಿಲ್ಲ" ಎಂದು ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರದ ಬಳಿ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಸಿಎಂ ಅವರು ದೆಹಲಿಗೆ ಹೋಗಿದ್ದಾರೆ. ಯಾಕೆ ಅಂತ ಗೊತ್ತಿಲ್ಲ. ಇಲಾಖೆ ವಿಚಾರಣೆನಾ, ಪಕ್ಷದ ವಿಚಾರಣೆನಾ ಅಂತ ಗೊತ್ತಿಲ್ಲ. ಇವತ್ತು ಸಿಎಂ ದೆಹಲಿಗೆ ಹೋಗ್ತಿದ್ದಾರೆ. ವರ್ಕಿಂಗ್ ಕಮಿಟಿಗಳ ಸಭೆ ನಾಳೆ ಇದೆ. ಸಾಮಾನ್ಯವಾಗಿ ಈ ಸಭೆಗೆ ಸಿಎಂ, ಕೆಪಿಸಿಸಿ ಅಧ್ಯಕ್ಷರನ್ನು ಕರೀತಾರೆ. ಇದಾದ ನಂತರ ಹೈಕಮಾಂಡ್ ಅವರ ಜತೆ ಸಂಪುಟ ಪುನಾರಚನೆ ಬಗ್ಗೆ ಅವರಿಬ್ಬರೂ ಚರ್ಚೆ ಮಾಡಬಹುದೇನೋ" ಎಂದರು.
"ಇದರ ಜತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗೂ ಇದೆ. ಅಲ್ಲಲ್ಲೇ ಮಾತುಗಳು ಕೇಳಿ ಬರುತ್ತಿವೆ. ಈ ಎರಡೂ ವಿಚಾರಗಳ ಬಗ್ಗೆಯೂ ಸಿಎಂ, ಡಿಸಿಎಂ ಚರ್ಚೆ ಮಾಡಿ ಏನು ತೀರ್ಮಾನ ಮಾಡ್ಕೊಂಡು ಬರ್ತಾರೆ ಅಂತ ಗೊತ್ತಿಲ್ಲ. ಖಾತೆ ಬದಲಾವಣೆ ಬಗ್ಗೆಯೂ ಏನು ತೀರ್ಮಾನ ಮಾಡ್ತಾರೋ ಗೊತ್ತಿಲ್ಲ. ಇಷ್ಟು ಕಾಲ ವರಿಷ್ಠರು ಏನೆಲ್ಲ ಜವಾಬ್ದಾರಿ ಕೊಟ್ಟಿದ್ದಾರೋ ಅವುಗಳನ್ನೆಲ್ಲ ನಿಭಾಯಿಸಿಕೊಂಡು ಬಂದಿದ್ದೇನೆ. ಈಗಲೂ ಅವರು ಏನೇ ಜವಾಬ್ದಾರಿ ಕೊಟ್ಟರೂ ಮಾಡೋದಿಕ್ಕೆ ನಾನು ತಯಾರಾಗಿರುತ್ತೇನೆ. ಪಕ್ಷದ ಸೂಚನೆ 35 ವರ್ಷಗಳಿಂದ ಪಾಲಿಸಿಕೊಂಡೇ ಬಂದಿದ್ದೇನೆ. ಸರ್ಕಾರ, ಪಕ್ಷದಲ್ಲಿ ಕೊಟ್ಟ ಜವಾಬ್ದಾರಿ ಮಾಡುತ್ತಾ ಬಂದಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಕೇಳಿದ್ದೇನೆ. ಒಂದೊಮ್ಮೆ ಆ ವಿಚಾರ ವರಿಷ್ಠರ ಮುಂದೆ ಇದ್ದರೆ ಬದಲಾವಣೆ ಮಾಡುತ್ತಾರೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.