ಬೆಂಗಳೂರು :ಕುಳ್ಳ ಪದ ಬಳಕೆ ಮಾಡೋದು ಸರಿಯಲ್ಲ, ಅವರವರ ಸಂಸ್ಕೃತಿ ಆಧಾರದ ಮೇಲೆ ಮಾತನಾಡಿರುತ್ತಾರೆ. ಅವರ ಹಿನ್ನೆಲೆ ಹೇಗಿರಬೇಕು ಗೊತ್ತಿಲ್ಲ. ಅದು ಕೆಟ್ಟದಾಗಿ ಕೇಳಿಸುತ್ತೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧದ ಪದಬಳಕೆ ಕುರಿತು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿದರು.
ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿಗೆ ಕರಿಯ ಎಂದು ಸಚಿವ ಜಮೀರ್ ಅಹಮ್ಮದ್ ಹೇಳಿಕೆ ವಿವಾದದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಜಮೀರ್ ಅಹಮ್ಮದ್ ವಿರುದ್ಧ ಕ್ರಮದ ಬಗ್ಗೆ ಅಧ್ಯಕ್ಷರೇ ಹೇಳಿದ್ದಾರೆ. ಶಿಸ್ತು ಕ್ರಮಕ್ಕೆ ಕಮಿಟಿ ಇದೆ. ಅವರಿಗೆ ರೆಫರ್ ಮಾಡಿದ್ರೆ ತನಿಖೆ ಮಾಡುತ್ತಾರೆ. ಶಿಸ್ತು ಸಮಿತಿಗೆ ದೂರು ಬಂದರೆ ಸ್ಪಷ್ಟೀಕರಣ ಕೇಳುತ್ತಾರೆ. ಅಲ್ಲಿ ಕರೆದು ನೋಟಿಸ್ ಕೊಟ್ಟು ಕೇಳ್ತಾರೆ ಎಂದು ಹೇಳಿದರು.
ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿದರು (ETV Bharat) ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ವಿಚಾರವಾಗಿ ಪ್ರತಿಕ್ರಿಯಿಸಿ, ಯೋಗೇಶ್ವರ್ ಅವರು ಈಗಾಗಲೇ ಹೇಳಿದ್ದಾರೆ. ಅಲ್ಲಿನ ಮತ ಹಾಕಿದ ಜನಗಳಿಗೆ ಗೊತ್ತಿದೆ, ಅವರೇ ಹೇಳುತ್ತಿದ್ದಾರೆ. ನಾವು ಗೆಲ್ಲಿಸುತ್ತಿದ್ದೇವೆ ಅಂತ ಮತದಾರರೇ ಹೇಳುತ್ತಿದ್ದಾರೆ. ಲೀಡ್ ಎಷ್ಟು ಅಂತ ಹೇಳಲು ಆಗಲ್ಲ, ಈಗ ನಾನು ಏನಾದರೂ ಹೇಳಿದ್ರೆ ತಪ್ಪಾಗುತ್ತದೆ. ನಾವು ಖಂಡಿತವಾಗಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
40% ಆರೋಪ ಮಾಡಿ ನಾವು ಅಧಿಕಾರಕ್ಕೆ ಬಂದಿಲ್ಲ: 40% ಕಮೀಷನ್ ಆರೋಪ ಸುಳ್ಳು ಎಂಬ ವರದಿ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಅಧಿಕಾರಕ್ಕೆ ಬಂದಿದ್ದೇ 40% ಆರೋಪ ಮಾಡಿದ ಕಾರಣದಿಂದ ಅಂತ ಯಾರು ಹೇಳಿದ್ದು?. ಆಗ ಬಿಜೆಪಿಯವರ ವಿರುದ್ಧ ಆರೋಪ ಬಂದಿತ್ತು. ಕೆಂಪಣ್ಣ ಅವರು ಪ್ರಧಾನಿ ಅವರಿಗೆ ದೂರು ಕೊಟ್ಟಿದ್ದರು. ಅದೇ ಕಾರಣಕ್ಕೆ ಜನರ ಹಿತ ಕಾಪಾಡುವ ದೃಷ್ಟಿಯಿಂದ ಹೋರಾಟ ಮಾಡಿದ್ದು ನಾವು. ಆದ್ರೆ ಅವರು ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ಬರೀ 40% ಪರ್ಸೆಂಟ್ ಆರೋಪ ಮಾಡಿ ಮಾತ್ರ ನಮ್ಮ ಸರ್ಕಾರ ಬಂದಿದ್ದು ಅನ್ನೋದು ಸುಳ್ಳು ಎಂದು ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡರು.
ಆಪರೇಷನ್ ಕಮಲ ಆರೋಪ ವಿಚಾರವಾಗಿ ಸಿಎಂ ದಾಖಲೆ ಬಿಡುಗಡೆ ಮಾಡಲಿ ಎಂಬ ವಿರೋಧ ಪಕ್ಷಗಳ ಆಗ್ರಹಕ್ಕೆ ಪ್ರತಿಕ್ರಿಯಿಸಿ, ಪ್ರಧಾನ ಮಂತ್ರಿಯವರು ಅಬಕಾರಿ ಇಲಾಖೆ ವಸೂಲಿ ಆರೋಪಕ್ಕೆ ದಾಖಲೆ ಕೊಟ್ಟಿದ್ದಾರಾ?. ಅವರು ದಾಖಲೆ ಕೊಡಲಿ ಮೊದಲು. 700 ಕೋಟಿ ರೂಪಾಯಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಕಳಿಸಿದ್ದಾರೆ ಅಂತ ಆರೋಪಿಸಿದ್ದಾರೆ. ಅದರ ಬಗ್ಗೆ ಮೋದಿಯವರು ದಾಖಲೆ ಕೊಡ್ಲಿ ಮೊದಲು. ಬಿಜೆಪಿಯವರು ಅವರನ್ನು ದಾಖಲೆ ಕೇಳಲಿ. ಆಮೇಲೆ ನಾವು ಕೊಡ್ತೀವಿ ಎಂದರು.
ಶಾಂತಿ ಕದಡಿದರೆ ಕಠಿಣ ಕ್ರಮ : ಬಿಜೆಪಿಯ ವಕ್ಫ್ ಹೋರಾಟದಿಂದ ರಾಜ್ಯದಲ್ಲಿ ಕೋಮುಗಲಭೆ ಆಗಬಹುದು ಎಂಬ ಡಿಸಿಎಂ ಆರೋಪ ವಿಚಾರವಾಗಿ ಮಾತನಾಡಿ, ವಕ್ಫ್ ವಿಚಾರವನ್ನು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಅನ್ನೋದು ಈಗಾಗಲೇ ಹೇಳಿದ್ದೇನೆ. ಅದನ್ನೇ ಅಸ್ತ್ರ ಮಾಡಿಕೊಂಡಿದ್ದಾರೆ. ಇದರಿಂದ ಕೋಮು ಗಲಭೆನೂ ಆಗಬಹುದು ಅಥವಾ ಶಾಂತಿ ಕದಡುವ ಕೆಲಸವೂ ಆಗಬಹುದು. ಅದಕ್ಕೆ ಅವರು ಈ ಪಾದಯಾತ್ರೆ ಉಪಯೋಗಿಸುತ್ತಾರೆ ಎಂದಿದ್ದೇವೆ. ಆದ್ರೆ ಮುಂದಕ್ಕೆ ಯಾವ ರೀತಿ ಮಾಡುತ್ತಾರೆ ಅನ್ನೋದು ಊಹೆ ಮಾಡೋಕೆ ಆಗಲ್ಲ. ರಾಜ್ಯದಲ್ಲಿ ಒಂದೂವರೆ ವರ್ಷದಿಂದ ಶಾಂತಿ ಕಾಪಾಡಿದ್ದೇವೆ. ಶಾಂತಿ ಕದಡುವ ಅಥವಾ ಭಂಗ ಮಾಡೋಕೆ ಬಂದ್ರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಅಷ್ಟು ಸುಲಭವಾಗಿ ಬಿಟ್ಟು ಕೊಡುತ್ತೇವಾ ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದರು.
ಗ್ಯಾರಂಟಿಯಿಂದ ಜನ ಲಾಭ ಪಡೆದುಕೊಳ್ಳುತ್ತಿದ್ದಾರೆ : ಮಹಾರಾಷ್ಟ್ರ ಎಲೆಕ್ಷನ್ನಲ್ಲಿ ಗ್ಯಾರಂಟಿ ಕುರಿತು ಬಿಜೆಪಿಯಿಂದ ಅಪಪ್ರಚಾರ ಆರೋಪ ವಿಚಾರವಾಗಿ ಮತನಾಡುತ್ತ, ಮಹಾವಿಕಾಸ ಅಘಾಡಿ ಗೆಲ್ಲುತ್ತದೆ. ಅಪಪ್ರಚಾರ ಮಾಡೋರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸಿಎಂ ಹೇಳಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿ ಜಾರಿ ಮಾಡಿದ್ದೇವೆ, ಹಣ ಮೀಸಲಿಟ್ಟಿದ್ದೇವೆ. ಈಗಾಗಲೇ ಗ್ಯಾರಂಟಿಯಿಂದ ಜನ ಲಾಭ ಪಡೆದುಕೊಳ್ಳುತ್ತಿದ್ದಾರೆ. ಅದಕ್ಕೆ ಏನೂ ಮಾಡಿಲ್ಲ ಅಂದ್ರೆ ಹೇಗೆ ಪ್ರಶ್ನಿಸಿದರು.
ಇದನ್ನೂ ಓದಿ :ಹೆಚ್‌ಡಿಕೆಗೆ 'ಕರಿಯಣ್ಣ' ಎಂದು ಸಂಬೋಧನೆ: ಕ್ಷಮೆಯಾಚಿಸಿದ ಸಚಿವ ಜಮೀರ್ ಅಹ್ಮದ್