ಬೆಂಗಳೂರು:ಕಾಲೇಜು ವಿದ್ಯಾರ್ಥಿಗಳ ರೂಮ್‌ಗೆ ನುಗ್ಗಿ ಸುಲಿಗೆ ಮಾಡಿದ್ದ ಆರೋಪದಡಿ ಗೃಹರಕ್ಷಕನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಪೊಲೀಸ್ ಠಾಣೆಯೊಂದರಲ್ಲಿ ನಿಯೋಜಿತವಾಗಿದ್ದ ಸುರೇಶ್ ಕುಮಾರ್ (40) ಬಂಧಿತ ಆರೋಪಿ.
ಜನವರಿ 25 ಮತ್ತು 26ರ ಮಧ್ಯರಾತ್ರಿ ಎಂ.ಎಸ್ ರಾಮಯ್ಯನಗರದಲ್ಲಿರುವ ವಿದ್ಯಾರ್ಥಿನಿಯರಿದ್ದ ರೂಮ್‌ಗೆ ನುಗ್ಗಿದ್ದ ಆರೋಪಿ ಅನುಚಿತವಾಗಿ ವರ್ತಿಸಿದ್ದ. ಹಾಗೂ ವಿದ್ಯಾರ್ಥಿಗಳಿಂದ ಹಂತಹಂತವಾಗಿ 5,000 ರೂ.ಗಳನ್ನು ಸುಲಿಗೆ ಮಾಡಿದ್ದ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬಳು ನಗರದ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಳು. ಎಂ.ಎಸ್.ರಾಮಯ್ಯ ನಗರದಲ್ಲಿ ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಬಾಡಿಗೆ ರೂಮ್‌ನಲ್ಲಿ ವಾಸವಿದ್ದಳು. ಜನವರಿ 25ರಂದು ರೂಮ್ ಬಳಿ ಬಂದಿದ್ದ ಸ್ನೇಹಿತನೊಬ್ಬನೊಂದಿಗೆ ಮೂವರು ಸಹ ಮಾತನಾಡುತ್ತಿದ್ದರು.
ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ಆರೋಪಿ ಸುರೇಶ್ ಕುಮಾರ್ ಅವರ ಮನೆ ಬಳಿ ಬಂದು ಬಾಗಿಲು ತಟ್ಟಿದ್ದ. ವಿದ್ಯಾರ್ಥಿನಿ ಬಾಗಿಲು ತೆಗೆದಾಗ "ನೀವು ತೊಂದರೆ ಕೊಡುತ್ತಿದ್ದೀರಿ ಎಂದು ನಮಗೆ ದೂರು ಬಂದಿದೆ" ಎನ್ನುತ್ತಾ ರೂಮ್‌ಗೆ ಪ್ರವೇಶಿಸಿದ್ದ. ಅಷ್ಟರಲ್ಲಿ ವಿದ್ಯಾರ್ಥಿನಿಯರೊಂದಿಗಿದ್ದ ಸ್ನೇಹಿತನು ಅದೇ ರೂಂನಲ್ಲಿದ್ದ ಓರ್ವ ವಿದ್ಯಾರ್ಥಿನಿಯ ಸೋದರ ಸಂಬಂಧಿಗೆ "ರೂಮ್ ಹತ್ತಿರ ಬಾ... ಏನೋ ಸಮಸ್ಯೆಯಾಗಿದೆ '' ಎಂದು ಸಂದೇಶ ರವಾನಿಸಿದ್ದ. ಅದರಂತೆ ಕೇರಳ ಮೂಲದ ವಿದ್ಯಾರ್ಥಿನಿಯ ಸಂಬಂಧಿ ಸ್ಥಳಕ್ಕೆ ಧಾವಿಸಿದಾಗ, ಆರೋಪಿ 'ತಾನು ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ' ಎಂದು ಹೇಳಿಕೊಂಡಿದ್ದ. ಸುರೇಶ್ ಕುಮಾರ್ ಯುವತಿಯೊಂದಿಗೆ ಅನುಚಿತವಾಗಿ ಮಾತನಾಡಿದ್ದ ಎಂದು ತಿಳಿದು ಬಂದಿದೆ.
ಅದೇ ಸಂದರ್ಭದಲ್ಲಿ ಮತ್ತೊಬ್ಬ ಸ್ನೇಹಿತ ಸ್ಥಳದ ಬಳಿ ಬಂದಾಗ, ಆರೋಪಿ ಸುರೇಶ್ ಕುಮಾರ್ ಸುಮಾರು ಆರು ತಿಂಗಳ ಹಿಂದೆ ಅದೇ ಪ್ರದೇಶದಲ್ಲಿ ತನ್ನನ್ನು ಭೇಟಿಯಾಗಿದ್ದ. ಮತ್ತು ಬೆದರಿಸಿ ಕಂತುಗಳಲ್ಲಿ ಹಣ ವಸೂಲಿ ಮಾಡಿದ್ದ. ಅಲ್ಲದೇ ತನ್ನ ಮೊಬೈಲ್ನ್ನು ಸ್ಕ್ಯಾನ್ ಮಾಡಿ ವಿದ್ಯಾರ್ಥಿನಿಯರ ಮೊಬೈಲ್ ಸಂಖ್ಯೆ ಮತ್ತು ವಿಳಾಸ ತೆಗೆದುಕೊಂಡಿದ್ದ ಎಂಬುದು ತಿಳಿದು ಬಂದಿದೆ.
ತಕ್ಷಣ ಯುವತಿಯ ಸ್ನೇಹಿತ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದು, ಅದರ ಅನ್ವಯ ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ, ಸುರೇಶ್ ಕುಮಾರ್‌ನನ್ನು ವಶಕ್ಕೆ ಪಡೆದು ಸದಾಶಿವನಗರ ಠಾಣೆಗೆ ಒಪ್ಪಿಸಿದ್ದಾರೆ. ಬಳಿಕ ವಿದ್ಯಾರ್ಥಿನಿಯ ಸ್ನೇಹಿತ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಸದಾಶಿವನಗರ ಠಾಣೆ ಪೊಲೀಸರು ಆರೋಪಿ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಇದನ್ನೂ ಓದಿ:ಉತ್ತರ ಕನ್ನಡದಲ್ಲೂ ಜೋರಾದ ಮೈಕ್ರೋ ಫೈನಾನ್ಸ್ ಹಾವಳಿ: 7 ಪ್ರತ್ಯೇಕ ಪ್ರಕರಣಗಳು ದಾಖಲು