ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ವರುಣಾರ್ಭಟ: ಇಂದೂ ಶಾಲೆಗಳಿಗೆ ರಜೆ ಘೋಷಣೆ - BENGALURU RAIN

ಬೆಂಗಳೂರು ನಗರ ಜಿಲ್ಲೆಯಾದ್ಯಂತ ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಸೋಮವಾರ ಶಾಲೆಗಳಿಗೆ ರಜೆ ನೀಡಲಾಗಿದೆ.

rainfall
ಬೆಂಗಳೂರಲ್ಲಿ ಮಳೆ (IANS)

By ETV Bharat Karnataka Team

Published : Oct 21, 2024, 10:30 AM IST

ಬೆಂಗಳೂರು:ಬೆಂಗಳೂರು ನಗರ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಇಂದು ಮುಂಜಾಗೃತಾ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಎಲ್ಲ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಖಾಸಗಿ/ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಜಿ. ಆದೇಶಿಸಿದ್ದಾರೆ. ಉಳಿದಂತೆ, ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಹಾಗೂ ಐಟಿಐಗಳಿಗೆ ರಜೆ ಇರುವುದಿಲ್ಲ.

ಕಾಲೇಜುಗಳಲ್ಲಿ ಪಾಠ ಪ್ರವಚನಗಳನ್ನು ನಡೆಸುವಾಗ ಕೆಲವೊಂದು ಅಂಶಗಳನ್ನು ಪರಿಗಣಿಸುವಂತೆ ಕಾಲೇಜುಗಳ ಮುಖ್ಯಸ್ಥರಿಗೆ ಹಾಗೂ ಸಂಬಂಧಪಟ್ಟವರಿಗೆ ಸಾಮಾನ್ಯ ಸೂಚನೆ ನೀಡಲಾಗಿದೆ. ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುವಾಗ ಹಾಗೂ ಮನೆಗೆ ತೆರಳುವ ಸಂದರ್ಭದಲ್ಲಿ ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ತಲುಪುವ ಬಗ್ಗೆ ಗಮನವಹಿಸಬೇಕು. ದುರ್ಬಲ, ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ ಪ್ರವಚನಗಳಿಗೆ ಬಳಸಬಾರದು. ಈ ನಿಟ್ಟಿನಲ್ಲಿ ಕಾಲೇಜುಗಳ ಮುಖ್ಯಸ್ಥರು ಕಟ್ಟಡಗಳ ಸುಸ್ಥಿತಿಯ ಬಗ್ಗೆ ಗಮನಹರಿಸಿ, ಯಾವುದೇ ಅವಘಡ ಉಂಟಾಗದಂತೆ ಸೂಕ್ತ ಕ್ರಮ ವಹಿಸುವಂತೆ ಡಿಸಿ ಸೂಚಿಸಿದ್ದಾರೆ.

ಮುಂಜಾಗೃತಾ ಕ್ರಮವಾಗಿ ರಜೆ ನೀಡಿದ್ದು, ಉಂಟಾಗುವ ಕಲಿಕಾ ಸಮಯ ಕೊರತೆಯನ್ನು ಶನಿವಾರ ಮಧ್ಯಾಹ್ನ ಅಥವಾ ಭಾನುವಾರಗಳಂದು ಹೆಚ್ಚುವರಿ ತರಗತಿಗಳನ್ನು ನಡೆಸಿ ನಷ್ಟವನ್ನು ಸರಿದೂಗಿಸಬೇಕು. ವಿದ್ಯಾರ್ಥಿಗಳ ಪೋಷಕರು, ಕಾಲೇಜು ಮುಖ್ಯಸ್ಥರು, ವಿದ್ಯಾರ್ಥಿಗಳು ನೀರು ಇರುವ ತಗ್ಗು ಪ್ರದೇಶಗಳಿಗೆ ಹೋಗದಂತೆ ಜಾಗ್ರತೆ ವಹಿಸಬೇಕು. ಕಾಲೇಜುಗಳಿಗೆ ಹೋಗುವ ವಾಹನಗಳ ಸುರಕ್ಷತೆ ನೋಡಿಕೊಳ್ಳುವುದು ಹಾಗೂ ಕಾಲೇಜುಗಳಲ್ಲಿ ಪ್ರಾಕೃತಿಕ ವಿಕೋಪ ನಿಭಾಯಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಹಾವೇರಿ: ಭಾನುವಾರ ರಾತ್ರಿಯಿಡೀ ಧಾರಾಕಾರ ಮಳೆಗೆ ಬೆಳೆ ನಾಶ: ಸಿಡಿಲಿಗೆ ಹೋರಿ ಬಲಿ

ABOUT THE AUTHOR

...view details