ಪುತ್ರನ ಪರ ಶಾಸಕ ಎಂ.ಚಂದ್ರಪ್ಪ ಬಂಡಾಯ ಚಿತ್ರದುರ್ಗ: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾಗಿದ್ದರಿಂದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಕಿಡಿಕಾರಿದ್ದಾರೆ. ಪುತ್ರ ರಘುಚಂದನ್ಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಚಿತ್ರದುರ್ಗದಲ್ಲಿ ಬಿಜೆಪಿ ಸ್ವಾಭಿಮಾನಿ ಕಾರ್ಯಕರ್ತರ ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಏಪ್ರಿಲ್ 3ರಂದು ಪುತ್ರ ರಘುಚಂದನ್ ನಾಮಪತ್ರ ಸಲ್ಲಿಸುವ ಕುರಿತು ಚಿಂತನೆ ನಡೆಸಲಾಗಿದೆ. ಬಿಜೆಪಿ ಟಿಕೆಟ್ ಬದಲಿಸಿ ನೀಡದಿದ್ದರೆ ಪಕ್ಷೇತರವಾಗಿ ಸ್ಪರ್ಧೆ ಮಾಡುವ ತೀರ್ಮಾನಕ್ಕೆ ಬರಲಾಗಿದೆ. 8 ಕ್ಷೇತ್ರದಲ್ಲಿರುವ ಬೆಂಬಲಿಗರು ನನ್ನ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ಸಾಧಕ ಬಾಧಕ ಬಗ್ಗೆ ಯೋಚಿಸಿ ಖಚಿತ ತೀರ್ಮಾನ ತೆಗೆದುಕೊಳ್ಳಲಾಗುವುದು. ಇನ್ನೂ ಕಾಲ ಮಿಂಚಿಲ್ಲ, ಬಿಜೆಪಿ ಟಿಕೆಟ್ ಕೇಳುತ್ತಿದ್ದೇವೆ. ನಮ್ಮ ನೋವು ವರಿಷ್ಠರಿಗೆ ಅರ್ಥ ಆಗಿದೆ ಎಂದು ಭಾವಿಸಿದ್ದೇವೆ. ಈ ಹಿಂದೆ ಕಾರಜೋಳ ಅವರೇ ನನ್ನ ಪುತ್ರನನ್ನು ಚುನಾವಣೆಗೆ ನಿಲ್ಲಿಸಲು ಹೇಳಿದ್ದರು. ಈಗ ಅವರೇ ಇಲ್ಲಿಗೆ ಬಂದಿರುವುದು ಸರಿಯೇ ಅಂತ ಕೇಳಿದ್ದೇನೆ. ಪಕ್ಷ ನನ್ನ ವಿರುದ್ಧ ಕ್ರಮ ಕೈಗೊಂಡರೆ ಕೈಗೊಳ್ಳಲಿ. ನಾನು ಈ ಮೊದಲೇ ಎಲ್ಲಕ್ಕೂ ಸಿದ್ಧನಾಗಿದ್ದೇನೆ' ಎಂದು ಬಂಡಾಯದ ಮಾತುಗಳನ್ನಾಡಿದ್ದಾರೆ.
ಟಿಕೆಟ್ ಆಕಾಂಕ್ಷಿ ರಘುಚಂದನ್ ಮಾತನಾಡಿ, 'ಸಂಘ ಪರಿವಾರದ ಇಬ್ಬರು ಹಿರಿಯರು ನನ್ನ ಜತೆ ಮಾತಾಡಿದ್ದಾರೆ. ನಮ್ಮ ಸಮಾಜಕ್ಕೆ ಅನ್ಯಾಯ ಆಗಿದೆ ಎಂದು ಅವರ ಬಳಿ ಹೇಳಿದ್ದೇನೆ. ಕಾರಜೋಳ ಅವರಿಗೆ ಜಿಲ್ಲೆಯ ಪರಿಚಯವೇ ಇಲ್ಲ ಎಂದು ಹೇಳಿದ್ದೇನೆ. ಟಿಕೆಟ್ ನೀಡಿರುವ ಬಗ್ಗೆ ಪುನರ್ ಪರಿಶೀಲಿಸುವುದಾಗಿ ಮಾತು ನೀಡಿದ್ದಾರೆ. ಮಾಜಿ ಶಾಸಕ, ಎಂಎಲ್ಸಿ ಹೇಳಿದರೆಂದು ಕಾರಜೋಳ ಬಂದಿದ್ದಾರೆ. ದಲಿತ ಸಿಎಂ ಹೆಸರು ಬಂದರೆ ಗೋವಿಂದ ಕಾರಜೋಳ ಅವರ ಹೆಸರಿದೆ. ಇಲ್ಲಿ ಸೋಲುಂಡರೆ ಕಾರಜೋಳ ಸ್ಥಿತಿ ಏನಾಗುತ್ತದೆ? ಶಾಸಕ, ಸಚಿವ ಎಲ್ಲವೂ ನಿಮಗೆ ಬೇಕೆಂದರೆ ಹೇಗೆ? ಎ.ನಾರಾಯಣಸ್ವಾಮಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಗಮನಿಸಿದ್ದಾರೆ. ಆನೇಕಲ್‌ನಲ್ಲಿ ಅವರು ಏಕೆ ಸೋತಿದ್ದರು ಅನ್ನೋದು ಸಹ ಗೊತ್ತಿರುವು ವಿಚಾರ. ಒಟ್ಟಿನಲ್ಲಿ ನಾವು ಈ ಬಾರಿ ಚುನಾವಣಾ ಕಣದಲ್ಲಿರಬೇಕೆಂದು ತೀರ್ಮಾನ ಮಾಡಿದ್ದೇವೆ. ಕಾರ್ಯಕರ್ತರು, ನನ್ನ ತಂದೆ ಚಂದ್ರಪ್ಪ ತೀರ್ಮಾನದಂತೆ ನಡೆಯುತ್ತೇನೆ' ಎಂದು ಸವಾಲು ಹಾಕಿದ್ದಾರೆ.
ಸಭೆಯಲ್ಲಿ ರಘುಚಂದನ್ ಬೆಂಬಲಿಗರು ಗೋಬ್ಯಾಕ್ ಗೋವಿಂದ ಕಾರಜೋಳ ಎಂಬ ಭಿತ್ತಿಚಿತ್ರ ಪ್ರದರ್ಶನದ ಮೂಲಕ ತಮ್ಮ ಆಕ್ರೋಶ ಹೊರಹಾಕಿದ ಘಟನೆ ಕೂಡ ನಡೆಯಿತು.
ಇದನ್ನೂ ಓದಿ:ರಾಜ್ಯದಲ್ಲಿ ಮತ್ತೆ ಬಿಜೆಪಿ - ಜೆಡಿಎಸ್ ಸಮ್ಮಿಶ್ರ ಸರ್ಕಾರ ತರಲು ಈ ಮೈತ್ರಿ ವೇದಿಕೆಯಾಗಬೇಕು: ಹೆಚ್ಡಿಕೆ ಕರೆ - JDS and BJP meeting