ಕರ್ನಾಟಕ

karnataka

ಐತಿಹಾಸಿಕ ಬೆಳಗಾವಿ ಗಣೇಶೋತ್ಸವದಲ್ಲಿ ರೈತ ಗಲ್ಲಿ ಹವಾ; ಮನೆ ಮುಂದೆ ಸರತಿ ಸಾಲಿನಲ್ಲಿ ಬೆನಕನ ದರ್ಶನ - Raitha Galli Ganeshotsava

By ETV Bharat Karnataka Team

Published : Sep 17, 2024, 12:26 PM IST

Updated : Sep 17, 2024, 6:15 PM IST

ಕಳೆದ 29 ವರ್ಷಗಳಿಂದ ಬೆಳಗಾವಿಯ ರೈತ ಗಲ್ಲಿಯಲ್ಲಿ 30 ಕುಟುಂಬಗಳು ವಿಭಿನ್ನವಾಗಿ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಇಲ್ಲಿರುವ ಗಣೇಶ ಮೂರ್ತಿಗಳನ್ನು ನೋಡಲೆಂದೇ ಜನ ಮುಗಿಬೀಳುತ್ತಾರೆ.

HISTORIC BELAGAVI GANESHOTSAVA: PEOPLE QUEUING UP IN FRONT OF RAITHA GALLI HOUSES
ರೈತ ಗಲ್ಲಿ ಮನೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಬೆನಕನ ದರ್ಶನ (ETV Bharat)

ಐತಿಹಾಸಿಕ ಬೆಳಗಾವಿ ಗಣೇಶೋತ್ಸವದಲ್ಲಿ ರೈತ ಗಲ್ಲಿ ಹವಾ (ETV Bharat)

ಬೆಳಗಾವಿ: ಸಾರ್ವಜನಿಕ ಮಂಡಳಿಗಳು ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಜನ ಮುಗಿಬಿದ್ದು ನೋಡುವುದು ಸರ್ವೇ ಸಾಮಾನ್ಯ. ಆದರೆ, ಬೆಳಗಾವಿ ಗಲ್ಲಿಯೊಂದರಲ್ಲಿ ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ವಿಶಿಷ್ಟ ಗಣಪತಿಗಳನ್ನು ಸರತಿ ಸಾಲಿನಲ್ಲಿ ನಿಂತು ನೋಡಿ ಸಂಭ್ರಮಿಸುತ್ತಿದ್ದಾರೆ.

ಹೌದು, ಬೆಳಗಾವಿ ವಡಗಾವಿಯ ರೈತ ಗಲ್ಲಿಯಲ್ಲಿ ಇಡೀ ರಾಜ್ಯದಲ್ಲೇ ವಿಶಿಷ್ಟವಾಗಿ ಗಣೇಶೋತ್ಸವ ಆಚರಿಸಲಾಗುತ್ತದೆ. ಹೆಸರೇ ಸೂಚಿಸುವಂತೆ ಇಲ್ಲಿ ಶೇ.98ರಷ್ಟು ರೈತ ಕುಟುಂಬಗಳೇ ವಾಸವಾಗಿವೆ. ಇಲ್ಲಿನ 30 ಕುಟುಂಬಗಳು ಕಳೆದ 29 ವರ್ಷಗಳಿಂದ ವಿಶಿಷ್ಟ ರೂಪಗಳ ಗಣೇಶ ಮೂರ್ತಿಗಳನ್ನು ಜೊತೆಗೆ ವಿವಿಧ ಸನ್ನಿವೇಶಗಳ ಪ್ರತಿಕೃತಿಗಳನ್ನು ಪ್ರತಿಷ್ಠಾಪಿಸುತ್ತಿರುವುದು ಗಮನ ಸೆಳೆದಿದೆ.

ವಿಶಿಷ್ಟ ರೂಪಗಳ ಗಣೇಶ ಮೂರ್ತಿಗಳು (ETV Bharat)

ಗ್ರಾಮೀಣ ಸಂಸ್ಕೃತಿ, ಮಂಜುಮ್ಮೆಲ್ ಬಾಯ್ಸ್ ಸಿನಿಮಾ, ಕಟ್ಟಡ ಕಾಮಗಾರಿ, ಜ್ಯೋತಿಬಾ ಮಂದಿರ, ಭತ್ತ ನಾಟಿ ಮಾಡುವ ವನಿತೆಯರು, ರಾಶಿ ಮಾಡುವ ದಂಪತಿ, ಎತ್ತಿನಬಂಡಿ ಕಟ್ಟಿಕೊಂಡ ಜಾತ್ರೆಗೆ ಹೋಗುತ್ತಿರುವ ಕುಟುಂಬ, ಕುಸ್ತಿ ಅಖಾಡದಲ್ಲಿ ಪೈಲ್ವಾನರ ಕಾಳಗ, ಸೀತಾರಾಮ ಕಲ್ಯಾಣ, ಕೃಷ್ಣಲೀಲೆ, ಛತ್ರಪತಿ ಶಿವಾಜಿಯ ಯುದ್ಧ ಸನ್ನಿವೇಶ, ಪಂಢರಪುರದ ಸಂತರ ಪಾದಯಾತ್ರೆ ಪ್ರತಿರೂಪಗಳು ಕಣ್ಮನ ಸೆಳೆಯುತ್ತಿವೆ. ಮತ್ತೊಂದೆಡೆ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾಡು ನಾಶ, ಭೂ ಒತ್ತುವರಿಯಂಥ ಸಮಸ್ಯೆಗಳ ಮೇಲೂ ಇಲ್ಲಿನ ಜನ ಬೆಳಕು ಚೆಲ್ಲಿರುವುದು ವಿಶೇಷ.

ವಿಶಿಷ್ಟ ರೂಪಗಳ ಗಣೇಶ ಮೂರ್ತಿಗಳು (ETV Bharat)

11 ದಿನವೂ ರೈತ ಗಲ್ಲಿಯಲ್ಲಿ ಜನ ಜಾತ್ರೆ ಕಂಡು ಬಂದಿದ್ದು, ಮಧ್ಯಾಹ್ನ 4ಕ್ಕೆ ಮೂರ್ತಿ ವೀಕ್ಷಣೆ ಆರಂಭವಾದರೆ, ಮಾರನೇ ದಿನ ಬೆಳಗಿನ ಜಾವ 5 ಗಂಟೆವರೆಗೂ ಜನರು ಸರತಿ ಸಾಲಿನಲ್ಲಿ ನಿಂತು ತರಹೇವಾರಿ ಮೂರ್ತಿಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು. ಈವರೆಗೆ ಈ ಮನೆಗಳಿಗೆ 1 ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿರುವುದು ದಾಖಲೆಯೇ ಸರಿ.

ವಿಶಿಷ್ಟ ರೂಪಗಳ ಗಣೇಶ ಮೂರ್ತಿಗಳು (ETV Bharat)

ಕಣ್ಮನ ಸೆಳೆಯುವ ಗೊಂಬೆಗಳು; ಪೌರಾಣಿಕ ಕಥೆಗಳು, ಐತಿಹಾಸಿಕ ಘಟನೆಗಳು, ಸಾಮಾಜಿಕ ಚಿಂತನೆಗಳು, ಕೃಷಿಕರ ಬದುಕು, ಜನಪದ ಆಚರಣೆಗಳು, ಅತ್ಯಾಧುನಿಕ ತಂತ್ರಜ್ಞಾನದ ಬೆಳವಣಿಗೆಗಳನ್ನು ಆಧರಿಸಿ ಗೊಂಬೆಗಳನ್ನು ಅಲಂಕರಿಸಲಾಗಿದೆ. ಸಣ್ಣ ಗೊಂಬೆಗಳಿಂದ ಹಿಡಿದು ಐದಡಿ ಎತ್ತರದ ಗೊಂಬೆಗಳೂ ಇಲ್ಲಿವೆ. ಪ್ರತಿಯೊಂದು ಗೊಂಬೆಗೂ ಯಂತ್ರಗಳ ಮೂಲಕ ಚಲನಶೀಲತೆ ನೀಡಲಾಗಿದೆ. 0.25 ಹೆಚ್‌.ಪಿ ಮೋಟಾರ್‌, ಟೇಬಲ್‌ ಫ್ಯಾನಿನಲ್ಲಿ ಬಳಸುವ ಯಂತ್ರಗಳು, ಕೀಲಿ ಕೊಡುವ ಆಟದ ಗಾಡಿಗಳನ್ನು ಬಳಸಿ ಗೊಂಬೆಗಳು ತಿರುಗುವಂತೆ, ಕುಣಿಯುವಂತೆ, ಕೆಲಸ ಮಾಡುವಂತೆ ಚಲನಶೀಲತೆ ನೀಡಿರುವುದು ಎಲ್ಲರನ್ನು ಚಕಿತಗೊಳಿಸಿದೆ. ಕಟ್ಟಿಗೆ, ರಬ್ಬರ್‌, ಬಟ್ಟೆಗಳಿಂದ ತಯಾರಿಸಿರುವ ಸುಂದರ ಗೊಂಬೆಗಳ ಓಡಾಟ ನೋಡುವುದೇ ಕಣ್ಣಿಗೆ ಹಬ್ಬ.

ವಿಶಿಷ್ಟ ರೂಪಗಳ ಗಣೇಶ ಮೂರ್ತಿಗಳು (ETV Bharat)

ಈಟಿವಿ ಭಾರತ ಜೊತೆಗೆ ಮಾತನಾಡಿದ ಪ್ರಗತಿ ಕಾಜೋಳ್ಕರ್, "ನಮ್ಮ ಮನೆಯಲ್ಲಿ ಜ್ಯೋತಿಬಾ ಮಂದಿರ ಮಾದರಿ ನಿರ್ಮಿಸಿದ್ದೇವೆ. ಇದಕ್ಕೆ ನಾನು ಮತ್ತು ಸಹೋದರ 15 ದಿನ ಸಮಯ ತೆಗೆದುಕೊಂಡಿದ್ದೇವೆ‌. ಜನ ಸಾರ್ವಜನಿಕ ಗಣೇಶ ಮೂರ್ತಿ ದರ್ಶನಕ್ಕೂ ಮೊದಲು ನಮ್ಮ ರೈತ ಗಲ್ಲಿ ಮನೆಗಳಿಗೆ ಭೇಟಿ ಕೊಡುತ್ತಿದ್ದಾರೆ. ಜನರು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ" ಎಂದು ಹರ್ಷ ವ್ಯಕ್ತಪಡಿಸಿದರು.

ಆದಿನಾಥ್ ಮಠಕರ್​ ಮಾತನಾಡಿ, "ಗ್ರಾಮೀಣ ಸಂಸ್ಕೃತಿ ಬಿಂಬಿಸುವ ನಿಟ್ಟಿನಲ್ಲಿ ಕೃತಕ ಆಲದ ಮರದ ಕಟ್ಟೆಯ ಮೇಲೆ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಗ್ರಾಮ ಪಂಚಾಯಿತಿ, ಚಕ್ಕಡಿ, ಕುಂಬಾರಿಕೆ, ಮಹಿಳೆಯರು ಬೋರ್​ವೆಲ್​ನಿಂದ ನೀರು ತರುತ್ತಿರುವುದು, ಪೌರ ಕಾರ್ಮಿಕರು ಕಸ ಗುಡಿಸುತ್ತಿರುವುದು ಸೇರಿ ಒಟ್ಟಾರೆ ಹಳ್ಳಿಯ ಬದುಕನ್ನು ಕಟ್ಟಿಕೊಟ್ಟಿದ್ದೇವೆ. ಬಹಳಷ್ಟು ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ" ಎಂದು ತಿಳಿಸಿದರು.

ಗಣಪತಿ ವೀಕ್ಷಣೆಗೆ ಆಗಮಿಸಿದ್ದ ಸರಳಾ ಸಾತ್ಪುತೆ ಮಾತನಾಡಿ, "ರೈತ ಗಲ್ಲಿಯಲ್ಲಿನ ಮನೆಗಳಿಗೆ ಭೇಟಿ ನೀಡದೇ ಗಣೇಶೋತ್ಸವ ಪೂರ್ತಿಯಾಗಲ್ಲ. ಪ್ರತಿ ಮನೆಯಲ್ಲೂ ವಿಶಿಷ್ಟ ಶೈಲಿಯ, ವಿವಿಧ ಅವತಾರಗಳ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಇಲ್ಲಿಯ ಪ್ರತಿ ಮನೆಯಲ್ಲೂ ವಿಶೇಷವಾಗಿ ಮೂರ್ತಿ ಕೂಡಿಸಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸಿ ಎಲ್ಲರೂ ಎಂಜಾಯ್ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ:ಗಣೇಶ ಪ್ರತಿಷ್ಠಾಪನೆ: ಕೇದಾರನಾಥದ ವಿಶೇಷ ಪ್ರತಿಕೃತಿ ನಿರ್ಮಿಸಿದ ಹಾವೇರಿ ಕುಟುಂಬ - Kedarnath Special Replica

Last Updated : Sep 17, 2024, 6:15 PM IST

ABOUT THE AUTHOR

...view details