ಕರ್ನಾಟಕ

karnataka

ಭಾವೈಕ್ಯತೆ: ಗಣೇಶೋತ್ಸವ ಸಮಿತಿಗೆ ಮುಸ್ಲಿಂ, ಈದ್ ಮಿಲಾದ್ ಸಮಿತಿಗೆ ಹಿಂದೂಗಳೇ ಅಧ್ಯಕ್ಷರು, ಉಪಾಧ್ಯಕ್ಷರು - Hindu Muslim Harmony

By ETV Bharat Karnataka Team

Published : Sep 15, 2024, 9:02 AM IST

Updated : Sep 15, 2024, 10:18 AM IST

ಗಣೇಶ ಹಬ್ಬದ ತಯಾರಿಯಲ್ಲಿ ಮುಸ್ಲಿಮರು ಹಾಗೂ ಈದ್​ ಮಿಲಾದ್​ ಹಬ್ಬದ ತಯಾರಿಯಲ್ಲಿ ಹಿಂದೂಗಳು ಸೇರಿ ಕೆಲಸ ಮಾಡಿ ಹಬ್ಬ ಆಚರಿಸುವ ಮೂಲಕ ಕಾರವಾರದ ವಾರ್ಡ್​ ಒಂದು ಹಿಂದೂ ಮುಸ್ಲಿಂ ಧಾರ್ಮಿಕ ಭಾವೈಕ್ಯತೆ ಮೆರೆದಿದ್ದಾರೆ.

Ganeshotsav committee has a Muslim, Eid Milad committee has a Hindu as president, vice-president
ಹಿಂದೂ-ಮುಸ್ಲಿಂರ ಭಾವೈಕ್ಯತ: ಗಣೇಶೋತ್ಸವ ಸಮಿತಿಗೆ ಮುಸ್ಲಿಂ, ಈದ್ ಮಿಲಾದ್ ಸಮಿತಿಗೆ ಹಿಂದೂಗಳೇ ಅಧ್ಯಕ್ಷರು, ಉಪಾಧ್ಯಕ್ಷರು (ETV Bharat)

ಹಿಂದೂ-ಮುಸ್ಲಿಂರ ಭಾವೈಕ್ಯತ: ಗಣೇಶೋತ್ಸವ ಸಮಿತಿಗೆ ಮುಸ್ಲಿಂ, ಈದ್ ಮಿಲಾದ್ ಸಮಿತಿಗೆ ಹಿಂದೂಗಳೇ ಅಧ್ಯಕ್ಷರು, ಉಪಾಧ್ಯಕ್ಷರು (ETV Bharat)

ಕಾರವಾರ: ಸಾಮಾನ್ಯವಾಗಿ ಒಂದೇ ಸಮಯಕ್ಕೆ ಬರುವ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬವನ್ನು ಎಲ್ಲೆಡೆ ಆಯಾ ಧರ್ಮೀಯರೇ ಸೇರಿ ಆಚರಿಸುತ್ತಾರೆ. ಆದರೆ ಕಾರವಾರದ ವಾರ್ಡ್ ಒಂದರಲ್ಲಿ ಗಣೇಶೋತ್ಸವ ಸಮಿತಿಗೆ ಮುಸ್ಲಿಂ ಹಾಗೂ ಈದ್ ಮಿಲಾದ್ ಸಮಿತಿಗೆ ಹಿಂದೂ ಯುವಕರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಕೆಲಸ ನಿಭಾಯಿಸುವುದರ ಜೊತೆಗೆ ಭಾವೈಕ್ಯತೆಯೊಂದಿಗೆ ಎರಡು ಧರ್ಮೀಯರು ಸೇರಿ ಹಬ್ಬವನ್ನು ಆಚರಿಸಿ ಮಾದರಿಯಾಗಿದ್ದಾರೆ.

ಕಾರವಾರ ನಗರದ ಕೋಣೆವಾಡದ ಹಿಂದೂ-ಮುಸ್ಲಿಂ ಯುವಕರು ಇಂತಹದೊಂದು ಭಾವೈಕ್ಯತೆಯ ಬೇಸುಗೆಗೆ ಸಾಕ್ಷಿಯಾಗಿದ್ದಾರೆ. ವಾರ್ಡ್​ನಲ್ಲಿ ಕಳೆದ ಎರಡೂವರೆ ದಶಕಗಳಿಂದ ಗಜಾನನ ಉತ್ಸವ ಸಮಿತಿ ರಚಿಸಿಕೊಂಡು 9 ದಿನಗಳ ಕಾಲ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಅದರಂತೆಯೇ ಈ ಬಾರಿಯೂ ಗಜಾನನ ಉತ್ಸವ ಸಮಿತಿ ಅಧ್ಯಕ್ಷ ನಜೀರ್ ರಾಣೇಬೆನ್ನೂರು, ಉಪಾಧ್ಯಕ್ಷ ನಿಸ್ಸಾರ್ ಶೇಖ್ ಅವರ ಮುಂದಾಳತ್ವದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ್ದು, ಪ್ರತಿನಿತ್ಯ ಪೂಜೆ ಸಲ್ಲಿಸಲಾಯಿತು. 9ನೇ ದಿನ ಅದ್ಧೂರಿಯಾಗಿ ನಿಮಜ್ಜನೆಗೂ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಎರಡು ಧರ್ಮದ ಯುವಕರು ಶನಿವಾರ ಮುಂಜಾನೆ ಗಣೇಶ ಮೂರ್ತಿಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಇರುವ ಹಿನ್ನೆಲ್ಲೆಯಲ್ಲಿ ದಾರಿಯುದ್ದಕ್ಕೂ ತಳಿರು ತೋರಣ ಸಿದ್ಧಪಡಿಸಿ ಕಟ್ಟಿದ್ದಾರೆ. ಅಲ್ಲದೆ ದಾರಿಯುದ್ದಕ್ಕೂ ಕೇಸರಿ ಪತಾಕೆ ಕಟ್ಟಿ ಪೂಜೆಯಲ್ಲಿಯೂ ಪಾಲ್ಗೊಂಡು ಅನ್ನಸಂತರ್ಪಣೆಗೂ ಕುರ್ಚಿ, ಟೇಬಲ್ ಹಾಕಿ ಬಂದ ಭಕ್ತರಿಗೆ ಊಟವನ್ನು ಬಡಿಸಿದ್ದಾರೆ.

ಇನ್ನು ವಾರ್ಡ್​ನಲ್ಲಿ ಮದೀನಾ ಜಾಮಿಯಾ ಮಸೀದಿ ಕೂಡ ಇದೆ. ಸೆ.17 ರಂದು ಈದ್ ಮಿಲಾದ್ ಹಿನ್ನೆಲ್ಲೆಯಲ್ಲಿ ಅದಕ್ಕೂ ಕೂಡ ಅಧ್ಯಕ್ಷರಾಗಿ ನಾಗರಾಜ ಹಾಗೂ ಉಪಾಧ್ಯಕ್ಷರಾಗಿ ವಿನಾಯಕ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ ಶುಕ್ರವಾರ ಸಂಜೆ ಮಸೀದಿ ಎದುರು ಕೂಡ ಲೈಟಿಂಗ್ಸ್, ಬಾವುಟ ಕಟ್ಟಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿನ ಸಿದ್ಧತೆಗೂ ಕೂಡ ಹಿಂದೂ ಮುಸ್ಲಿಂ ಯುವಕರು ಸೇರಿ ಕೆಲಸ ಮಾಡಿದ್ದಾರೆ.

"ಈದ್ ಮಿಲಾದ್ ಹಬ್ಬದ ದಿನ ನಾವು ಕೂಡ ಅವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಅಂದು ನಮ್ಮ ಹಬ್ಬದಂತೆ ಅವರೊಂದಿಗೆ ನಾವು ಕೂಡ ಸಂಭ್ರಮಿಸುತ್ತೇವೆ. ಅಲ್ಲದೆ ಗಣೇಶೋತ್ಸವ ಮೆರವಣಿಗೆ ವೇಳೆ ಮಸೀದಿ ಎದುರು ಹಾದು ಹೋಗುವಾಗ ಸೌಂಡ್ ಕೂಡ ಬಂದ್ ಮಾಡಿಕೊಂಡು ತೆರಳಲು ಈಗಾಗಲೇ ನಿರ್ಧಾರ ಮಾಡಲಾಗಿದೆ. ಎಲ್ಲಿ ಏನೇ ಗಲಾಟೆ ನಡೆದರೂ ಹಿಂದೂ ಮುಸ್ಲಿಂ ಎಂದು ರಾಜಕೀಯ ಮಾಡುವವರು ಹೆಚ್ಚಾಗಿದ್ದಾರೆ. ಆದರೆ ಅವರು ನಮಗೆ ಬೇಕಾಗಿಲ್ಲ. ನಾವು ಇಲ್ಲಿ ಎಲ್ಲರೂ ಅಣ್ಣತಮ್ಮಂದಿರ ರೀತಿ ಇದ್ದೇವೆ. ಮುಂದೆಯೂ ಇದೇ ರೀತಿ ಇರುತ್ತೇವೆ. ಮುಂದಿನ ವರ್ಷ 25ನೇ ವರ್ಷದ ಗಣೇಶೋತ್ಸವ ನಡೆಯುವುದರಿಂದ ಇನ್ನಷ್ಟು ವಿಜೃಂಭಣೆಯಿಂದ ಆಚರಿಸುತ್ತೇವೆ" ಎನ್ನುತ್ತಾರೆ ಸ್ಥಳೀಯ ರಂಗಣ್ಣ ವಡ್ಡರ್.

"ಇನ್ನು ವಾರ್ಡ್​ನಲ್ಲಿ ಕಳೆದ 24 ವರ್ಷದ ಹಿಂದೆ ಗಜಾನನ ಉತ್ಸವ ಸಮಿತಿ ರಚನೆ ಮಾಡಿ ಗಣಪತಿ ಕೂರಿಸಲು ತೀರ್ಮಾನಿಸಲಾಗಿತ್ತು. ಅದಕ್ಕೆ ಮುಸ್ಲಿಂ ಸಮುದಾಯದವರೇ ಗಣಪತಿ ನೀಡಿದ್ದರು. ಅಂದಿನಿಂದಲೂ ಇಲ್ಲಿ ಹಿಂದೂ ಮುಸ್ಲಿಮರು ಮಾದರಿಯಾಗಿ ಬದುಕುತ್ತಿದ್ದಾರೆ. ನಮ್ಮಲ್ಲಿ ಹಿಂದೂ-ಮುಸ್ಲಿಂ ಭೇದಭಾವ ಇಲ್ಲ. ನಾವೆಲ್ಲರೂ ಸೇರಿ ಹಬ್ಬವನ್ನು ಆಚರಿಸುತ್ತೇವೆ. ಹಿಂದೂ-ಮುಸ್ಲಿಂ ಎರಡು ಧರ್ಮೀಯರನ್ನೊಳಗೊಂಡ ಸಮಿತಿ ರಚಿಸಿಕೊಂಡು ಹಬ್ಬ ಆಚರಿಸುತ್ತೇವೆ. ಅದೇ ರೀತಿ ಈದ್ ಮಿಲಾದ್ ಕೂಡ ಹತ್ತಿರ ಬಂದಿದ್ದು, ಆಗ ಕೂಡ ನಮ್ಮ ವಾರ್ಡ್​ನ ಹಿಂದೂ ಯುವಕರು ನಮ್ಮೊಂದಿಗೆ ಬೆಂಬಲವಾಗಿ ನಿಲ್ಲುತ್ತಾರೆ. ನಮ್ಮಲ್ಲಿ ಯಾವುದೇ ಗಲಾಟೆ ನಡೆಯುವುದಿಲ್ಲ. ಎಲ್ಲೆಡೆಯೂ ಇಂತಹ ಬಾಂಧವ್ಯ ನಿರ್ಮಾಣ ಆಗಬೇಕು" ಎಂದು ಸ್ಥಳೀಯ ಬಾಬು ಶೇಖ್ ಹೇಳಿದರು.

ಕೋಣೆವಾಡದ ಹಿಂದೂ ಮುಸ್ಲಿಂ ಯುವಕರು ವಿಭಿನ್ನವಾಗಿ ಯೋಚಿಸಿ ಹಬ್ಬವನ್ನು ಮಾದರಿಯಾಗಿ ಆಚರಿಸುತ್ತಿದ್ದು, ಭಾವೈಕ್ಯತೆ ಮೆರೆದಿದ್ದಾರೆ.

ಇದನ್ನೂ ಓದಿ:ಕೊಪ್ಪಳ: ಗಣೇಶ ಹಬ್ಬದಲ್ಲೂ ಹಿಂದೂ-ಮುಸ್ಲಿಂ ಸ್ನೇಹಿತರ ಭಾವೈಕ್ಯತೆ - Harmony of Hindu Muslim friends

Last Updated : Sep 15, 2024, 10:18 AM IST

ABOUT THE AUTHOR

...view details