ಬೆಂಗಳೂರು:ಅನೇಕ ವರ್ಷಗಳಿಂದ ಹಿಂದೂ ಸಮಾಜ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಗಣೇಶೋತ್ಸವವನ್ನು ಆಚರಿಸುತ್ತ ಬಂದಿದೆ. ಈ ಮೂಲಕ ಇಡೀ ಸಮಾಜ ಯಾವುದೇ ಭೇದವಿಲ್ಲದೆ ಒಂದಾಗುತ್ತದೆ. ಈ ಗಣೇಶೋತ್ಸವ ಪೆಂಡಾಲುಗಳಲ್ಲಿ ತಲತಲಾಂತರಗಳಿಂದ ನಮ್ಮ ಬಂಧು ಮಿತ್ರರಿಗೆ ಪ್ರಸಾದ ಹಂಚುವುದು, ಅನ್ನ ಸಂತರ್ಪಣೆಯಂತಹ ಪುಣ್ಯಕಾರ್ಯಗಳನ್ನು ಮಾಡಲಾಗುತ್ತದೆ. ಈ ವೇಳೆ ಪೆಂಡಾಲುಗಳಲ್ಲಿ ಪ್ರಸಾದ ತಯಾರಿಸುವ ವ್ಯಕ್ತಿ ಆಹಾರ ಪರವಾನಗಿ ಪ್ರಮಾಣಪತ್ರ ಪಡೆದಿರಬೇಕೆಂಬ ಕಡ್ಡಾಯ ಆದೇಶ ಜಾರಿಗೊಳಿಸಿ ಬಿಬಿಎಂಪಿ ಈ ಪುಣ್ಯಕಾರ್ಯದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಅನೇಕ ಕಡೆಗಳಲ್ಲಿ ಗಣೇಶಭಕ್ತರು ಅತ್ಯಂತ ಶ್ರದ್ಧಾ ಭಕ್ತಿಯಿಂದ ತಮ್ಮ ತಮ್ಮ ಮನೆಗಳಲ್ಲಿ ಪ್ರಸಾದದ ತಯಾರಿ ಮಾಡಿ ಅದನ್ನು ಪೆಂಡಾಲುಗಳಲ್ಲಿ ಇತರರಿಗೆ ಹಂಚುತ್ತಾರೆ. ಹೀಗಿರುವಾಗ ಅಂಥವರು ಆಹಾರ ಪರವಾನಗಿ ಪ್ರಮಾಣಪತ್ರ ಎಲ್ಲಿಂದ ತರಲಾಗುತ್ತದೆ. ಬೇರೆ ಬೇರೆ ಸಂದರ್ಭದಲ್ಲಿ ಅಕ್ರಮವಾಗಿ ರಸ್ತೆ ಮಧ್ಯದಲ್ಲಿಯೇ ಅಡುಗೆ ಮಾಡಿ ವಿತರಣೆ ಮಾಡಲಾಗುತ್ತದೆ. ಇದರ ಗುಣಮಟ್ಟ ಪರಿಶೀಲನೆ ಬಗ್ಗೆ ಬಿಬಿಎಂಪಿ ಎಂದಾದರೂ ಪ್ರಶ್ನಿಸುವುದೇ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕಾರ ಶರತ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.