ಬೆಂಗಳೂರು: ಕನ್ನಡಿಗರ ನೆಲ-ಜಲ ಪಡೆದು ಅವರಿಗೇ ಉದ್ಯೋಗ ನೀಡುತ್ತಿಲ್ಲ. ಅಧಿಕಾರಿಗಳ ಹುದ್ದೆಗಳಿಗೆ ಕನ್ನಡಿಗರನ್ನು ನೇಮಿಸುವುದಿಲ್ಲ. ಕೇವಲ ‘ಸಿ’ ಹಾಗೂ ‘ಡಿ’ ವೃಂದದ ಉದ್ಯೋಗಗಳನ್ನು ಕನ್ನಡಿಗರಿಗೆ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ. ಎಲ್ಲಾ ಹಂತದ ಹುದ್ದೆಗಳಲ್ಲೂ ಸಮಾನ ಅವಕಾಶ ನೀಡುವಂತಾಗಬೇಕು. ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳ ಪ್ರಾರಂಭಿಸಲು ಸರ್ಕಾರದಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನು ಪಡೆದರೂ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಲು ಖಾಸಗಿ ಕಂಪನಿಗಳು ತೋರಿಸುತ್ತಿರುವ ನಿರಾಸಕ್ತಿಗೆ ಇಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಕಾಲ್ ಸೆಂಟರ್ ಸೇರಿದಂತೆ ವಿವಿಧ ಕೇಂದ್ರಗಳ ನಿರ್ಮಾಣಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಹಾರ್ಡ್‌ವೇರ್ ಪಾರ್ಕ್‌ನಲ್ಲಿ ನಾಲ್ಕೂವರೆ ಎಕರೆ ಜಮೀನು ಹಂಚಿಕೆ ಮಾಡಿ ಹೊರಡಿಸಿದ್ದ ಆದೇಶ ರದ್ದುಪಡಿಸಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಐಡಿಬಿಐ ಬ್ಯಾಂಕ್ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.
ವಿಚಾರಣೆ ವೇಳೆ ಕನ್ನಡಿಗರಿಗೆ ಉದ್ಯೋಗ ನೀಡಲು ಬ್ಯಾಂಕ್ ಹಿಂದೇಟು ಹಾಕಿರುವ ಅಂಶವನ್ನು ಗಮನಿಸಿದ ನ್ಯಾಯಪೀಠ, ಅತೃಪ್ತಿ ವ್ಯಕ್ತಪಡಿಸಿತು. ಅಲ್ಲದೆ, ಕನ್ನಡಿಗರ ನೆಲ-ಜಲ ಪಡೆದು ಅವರಿಗೆ ಉದ್ಯೋಗ ನೀಡದಿದ್ದರೆ ಹೇಗೆ?. ಉದ್ಯೋಗ ನೀಡದಿದ್ದರೆ ಕನ್ನಡಿಗರ ಆತ್ಮಸಾಕ್ಷಿಗೆ ಚುಚ್ಚಿದಂತಾಗುತ್ತದೆ. ಜವಾನ-ಝಾಡಮಾಲಿ ಅಂತಹ ಉದ್ಯೋಗಗಳಿಗೆ ಮಾತ್ರ ಕನ್ನಡಿಗರನ್ನು ನೇಮಕ ಮಾಡುವುದಲ್ಲ. ಎಲ್ಲಾ ಹಂತದ ಹುದ್ದೆಗಳಿಗೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು ಎಂದು ತಾಕೀತು ಮಾಡಿತು. ಸಂಸ್ಥೆಯಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ನೀಡುವುದಾಗಿ ಪ್ರಮಾಣಪತ್ರ ಸಲ್ಲಿಸುವಂತೆಯೂ ಐಡಿಬಿಐ ಬ್ಯಾಂಕ್‌ಗೆ ಸೂಚಿಸಿದೆ.
ಕಾದಂಬರಿಕಾರ ಗಳಗನಾಥ ಅವರ ಮಾತುಗಳನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ಕನ್ನಡಿಗರಿಗೆ ಕನ್ನಡಿಗರಿಂದ ಆದಷ್ಟು ಅನ್ಯಾಯ ಬೇರೆಯವರಿಂದ ಆಗಿಲ್ಲ. ಇಂತಹ ಅನ್ಯಾಯ ಬೇರೆಲ್ಲೂ ಆಗಿಲ್ಲ. ಬ್ರಿಟಿಷ್ ಅಧಿಕಾರಿ ರಾಬರ್ಟ್ ಕ್ಲೈವ್ ಸ್ಥಳೀಯರನ್ನು ಗ್ರೂಪ್ ಸಿ ಹುದ್ದೆಗೆ ನೇಮಿಸುತ್ತಿದ್ದರು. ಅದೇ ರೀತಿ ನೀವೂ ಸಹ ವರ್ತಿಸಬಾರದೆಂದು ಬ್ಯಾಂಕ್ ಪರ ವಕೀಲರ ಕಿವಿ ಹಿಂಡಿತು.