ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ರಾಜ್ಯಾದ್ಯಂತ ನಡೆಸುವ ವಸತಿ ನಿಲಯಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮತ್ತು ಒದಗಿಸುತ್ತಿರುವ ಆಹಾರದ ಬಗ್ಗೆ ಪ್ರತಿಕ್ರಿಯೆ ಅಥವಾ ದೂರುಗಳನ್ನು ದಾಖಲಿಸಲು ರಾಜ್ಯ ಸರ್ಕಾರ ಪೋರ್ಟಲ್ ಆರಂಭಿಸುವ ನಿರ್ಧಾರವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ವಸತಿ ನಿಲಯಗಳಿಗೆ ಹೊಸದಾಗಿ ಆಹಾರ ಪೂರೈಕೆ ಮಾಡಲು ಕೆಲವು ಷರತ್ತುಗಳನ್ನು ವಿಧಿಸಿ ಪರಿಷ್ಕರಿಸಿರುವ ಟೆಂಡರ್ ಅನ್ನು ಪ್ರಶ್ನಿಸಿ ಕಲಬುರಗಿ, ಬೀದರ್, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಶಿವಶಕ್ತಿ ದಾಲ್ ಇಂಡಸ್ಟ್ರೀಸ್ ಮತ್ತು ಟ್ರೇಡರ‍್ಸ್ ಸೇರಿದಂತೆ ಹಲವು ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಸರ್ಕಾರ ಉದ್ದೇಶಿಸಿರುವ ಪೋರ್ಟಲ್ ಅಭಿವೃದ್ಧಿಗೆ ಏನೇನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಜನವರಿ 30 ರೊಳಗೆ ವಿವರವನ್ನು ನೀಡುವಂತೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿತು.
ಸರ್ಕಾರ ಸದ್ಯದಲ್ಲೇ ಪೋರ್ಟಲ್ ಆರಂಭಿಸಲಾಗುವುದು, ಅದರಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಪೂರೈಕೆ ಮಾಡುತ್ತಿರುವ ಆಹಾರ ಸಾಮಗ್ರಿಗಳ ಬಗ್ಗೆ ದೂರುಗಳಿದ್ದರೂ ಸಲ್ಲಿಸಬಹುದು, ಅವುಗಳನ್ನು ಪರಿಶೀಲಿಸಿ ಸರ್ಕಾರ ಸೂಕ್ತ ಕ್ರಮ ಜುರಗಿಸಲಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಆಹಾರ ಗುಣಮಟ್ಟದ ಬಗ್ಗೆ ತಪಾಸಣೆ ನಡೆಸಿದ ಬಳಿಕ ಅದರ ವಿವರಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ. ಒಂದು ವೇಳೆ ತಪಾಸಣೆ ವೇಳೆ ನಿಯಮಗಳ ಉಲ್ಲಂಘನೆ ಕಂಡುಬಂದರೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. ಸರ್ಕಾರದ ಈ ಕ್ರಮ ನ್ಯಾಯಸಮ್ಮತವಾಗಿದೆ ಎಂದು ಅಭಿಪ್ರಾಯಪಟ್ಟು, ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ.