ಬೆಂಗಳೂರು:ರಾಜ್ಯದಲ್ಲಿ ಜಾರಿ ಮಾಡಿರುವ ಶಕ್ತಿ ಯೋಜನೆಯಿಂದ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪುತ್ತಿದ್ದಾರೆ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಖುದ್ದು ಹಾಜರಾಗಿ ಸ್ಪಷ್ಟೀಕರಣ ನೀಡಲು ಸೂಚಿಸಿ ರಾಜ್ಯ ಮಹಿಳಾ ಆಯೋಗ ಜಾರಿ ಮಾಡಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆ ನೀಡಿದೆ. ಜೊತೆಗೆ ಮಹಿಳಾ ಆಯೋಗಕ್ಕೆ ತುರ್ತು ನೋಟಿಸ್ ಜಾರಿ ಮಾಡಿದೆ.
ಮಹಿಳಾ ಆಯೋಗ ಜಾರಿ ಮಾಡಿದ್ದ ಸ್ಪಷ್ಟೀಕರಣ ನೋಟಿಸ್ ಪ್ರಶ್ನಿಸಿ ಹೆಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಕುಮಾರಸ್ವಾಮಿ ಪರ ವಾದ ಮಂಡಿಸಿದ ವಕೀಲ ಎ.ವಿ.ನಿಶಾಂತ್, ಮಹಿಳಾ ಆಯೋಗಕ್ಕೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ. ಅಲ್ಲದೆ, ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಬೇಕಾದಲ್ಲಿ ಆಯೋಗದ ಕಾರ್ಯದರ್ಶಿಗಳ ಮೂಲಕ ಜಾರಿ ಮಾಡಬೇಕು. ಆದರೆ, ಪ್ರಸ್ತುತ ಪ್ರಕರಣದಲ್ಲಿ ಆಯೋಗದ ಅಧ್ಯಕ್ಷರು ನೋಟಿಸ್ ಜಾರಿ ಮಾಡಿದ್ದಾರೆ. ಈ ಪ್ರಕ್ರಿಯೆಗೆ ಕಾನೂನಿನಲ್ಲಿ ಅವಕಾಶವಿಲ್ಲ. ಜೊತೆಗೆ, ನೋಟಿಸ್ ತಲುಪಿದ ಏಳು ದಿನಗಳಲ್ಲಿ ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟೀಕರಣ ನೀಡಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಆದ್ದರಿಂದ ನೋಟಿಸ್ ರದ್ದು ಮಾಡಬೇಕು ಎಂದು ಕೋರಿದರು.
ವಾದ ಆಲಿಸಿದ ಪೀಠ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿತು. ಅಲ್ಲದೆ, ಆಯೋಗ ಜಾರಿ ಮಾಡಿದ್ದ ನೋಟಿಸ್‌ಗೆ ತಡೆ ನೀಡಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ:ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 2024ರ ಏಪ್ರಿಲ್ 13ರಂದು ತುರುವೇಕೆರೆಯಲ್ಲಿ ಎನ್ಡಿಎ ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ನಡೆದ ಬಹಿರಂಗ ಪ್ರಚಾರದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, "ರಾಜ್ಯ ಸರ್ಕಾರ ಕೊಟ್ಟಿರುವ ಗ್ಯಾರೆಂಟಿ ಯೋಜನೆಯಿಂದ ತಮ್ಮ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದು, ಹಳ್ಳಿಯ ಹೆಣ್ಣು ಮಕ್ಕಳು ಬದುಕು ಏನಾಗಬೇಕು ಎಂಬುದರ ಕುರಿತಾಗಿ ಯೋಚನೆ ಮಾಡಬೇಕಾಗಿದೆ. ನಿಮ್ಮ ಕುಟುಂಬದ ಬದುಕೇನಾಗಬೇಕು ಎಂಬುದನ್ನು ಯೋಚನೆ ಮಾಡಬೇಕಿದೆ. ಅವರಿಗೆ ಐದು ಗ್ಯಾರಂಟಿ ಬಿಟ್ಟು ಬೇರೇನಿಲ್ಲ. ಐದು ಗ್ಯಾರಂಟಿ ಪ್ರಚಾರಕ್ಕಾಗಿ ಫೋಟೋ ಹಾಕಿಕೊಂಡು ಎಷ್ಟು ಹಣ ಖರ್ಚು ಮಾಡುತ್ತಿದ್ದಾರೆ ಎಂದು ಪ್ರತಿದಿನ ದಿನಪತ್ರಿಕೆ ನೋಡಿದ್ರೆ ನಿಮಗೆ ಗೊತ್ತಾಗುತ್ತೆ. ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಮುನ್ನೂರು ಕೋಟಿಗಿಂತ ಹೆಚ್ಚು ಹಣವನ್ನು ಪತ್ರಿಕೆಗಳಲ್ಲಿ ಜಾಹೀರಾತು ಹಾಕುವುದಕ್ಕೆ ಖರ್ಚು ಮಾಡಿದ್ದು ಆ ದುಡ್ಡು ಸಹ ನಿಮ್ಮದೇ? ಕಾಂಗ್ರೆಸ್ ಕಚೇರಿಯಿಂದ ಹಾಕಿರುವ ದುಡ್ಡು ಅಲ್ಲ" ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.
ಈ ಸಂಬಂಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದ ಮಹಿಳಾ ಆಯೋಗ 2024ರ ಏಪ್ರಿಲ್ 15ರಂದು ಕುಮಾರಸ್ವಾಮಿ ಅವರಿಗೆ ಸ್ಪಷ್ಟೀಕರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:ಮಹಿಳೆಯರಿಗೆ ಅಪಮಾನ ಆಗುವ ರೀತಿಯಲ್ಲಿ ಮಾತನಾಡಿಲ್ಲ: ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ - HD Kumaraswamy
ಗ್ಯಾರಂಟಿ ಯೋಜನೆಯಿಂದ ಹಳ್ಳಿಯ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ - HD Kumaraswamy