ಬೆಂಗಳೂರು:ದೇಶ ವಿಭಜಿಸುವಂಥ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿ ಮಾಡಬೇಕೆಂದು ಹೇಳಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಹೈಕೋರ್ಟ್ ತಡೆ ನೀಡಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು ಮಾಡುವಂತೆ ಕೋರಿ ಈಶ್ವರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಎಫ್ಐಆರ್ಗೆ ತಡೆ ನೀಡಿ ವಿಚಾರಣೆ ಮುಂದೂಡಿತು. ಇದೇ ವೇಳೆ ನ್ಯಾಯಮೂರ್ತಿಗಳು, ಆಕ್ಷೇಪಾರ್ಹ ಹೇಳಿಕೆ ನೀಡುವ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ನಮ್ಮ ಧುರೀಣರಿಗೆ ಏಕೆ ಒಳ್ಳೆಯ ಭಾಷೆ ಬಳಸಲು ಬರುತ್ತಿಲ್ಲ. ಅವರು ಮಾತನಾಡುವಾಗ ಉತ್ತಮ ಸಂಸ್ಕೃತಿಯನ್ನೇಕೆ ಪ್ರತಿಬಿಂಬಿಸುತ್ತಿಲ್ಲ?. ಹೀಗೆ ಮಾತನಾಡಿ ಭಾಷೆಯ ಮೇಲೆ ಏಕೆ ದೌರ್ಜನ್ಯ ಮಾಡುತ್ತಿದ್ದಾರೆ. ಕರ್ನಾಟಕ ವಿವಿಧ ಸಿದ್ಧಾಂತದ ಜನರನ್ನು ಹೊಂದಿರುವ ರಾಜ್ಯ. ಭಾಷೆಯ ಬಳಕೆಯ ಬಗ್ಗೆ ರಾಜಕಾರಣಿಗಳು ಎಚ್ಚರದಿಂದಿರಬೇಕು. ಶಾಲಾ ಮಕ್ಕಳು ನಮ್ಮನ್ನು ನೋಡುತ್ತಿರುತ್ತಾರೆ ಎಂಬ ಅರಿವಿರಬೇಕು ಎಂದು ಚಾಟಿ ಬೀಸಿದರು.
ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಅರುಣ್ ಶ್ಯಾಮ್, ಅರ್ಜಿದಾರರಾಗಿರುವ ಈಶ್ವರಪ್ಪನವರು ದೇಶ ವಿಭಜನೆ ಮಾಡುವಂತೆ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವಂತಹ ಕಾನೂನು ಜಾರಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ, ಯಾವುದೇ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಕೊಲ್ಲಿ ಎಂಬುದಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ. ಅಂತಹ ಉದ್ದೇಶವೂ ಅವರಿಗಿರಲಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.