ಬೆಂಗಳೂರು: ರಾಷ್ಟ್ರೀಯ ಸ್ಮಾರಕ ಎಂದು ಘೋಷಣೆಯಾಗಿರುವ ಕಲಬುರಗಿ ಕೋಟೆಯ ಸಂರಕ್ಷಿತ ಪ್ರದೇಶದಲ್ಲಿ ಒತ್ತುವರಿ ತೆರವು ಮಾಡುವಂತೆ 5 ವರ್ಷಗಳ ಹಿಂದೆ ನೀಡಿದ್ದ ಆದೇಶವನ್ನು ಪಾಲಿಸದ ಅಧಿಕಾರಿಗಳ ನಡೆಗೆ ಹೈಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಕೋಟೆಯ ಸೂಕ್ಷ್ಮ ಪ್ರದೇಶದ ಒತ್ತುವರಿ ತೆರವು ಕೋರಿ ಮಾಹಿತಿ ಹಕ್ಕು ಕಾರ್ಯಕರ್ತ ಶರಣ್ ದೇಸಾಯಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ವಿಚಾರಣೆ ನಡೆಸಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರಿದ್ದ ವಿಭಾಗೀಯ ಪೀಠ, ಸರ್ಕಾರದ ಪ್ರಾಧಿಕಾರಗಳನ್ನು ತರಾಟೆಗೆ ತೆಗೆದುಕೊಂಡಿತು.
ಅಲ್ಲದೆ, ಕೋಟೆಯ ಸುತ್ತ ಆಗಿರುವ ಒತ್ತುವರಿ ತೆರವುಗೊಳಿಸುವ ಸಂಬಂಧ ಕೈಗೊಳ್ಳಬಹುದಾದ ಕಾರ್ಯವಿಧಾನಗಳ ಕುರಿತಂತೆ ವಿವರವಾದ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರು ಮತ್ತು ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಜೊತೆಗೆ, 2019ರಲ್ಲಿ ಹೊರಡಿಸಿರುವ ಆದೇಶದಲ್ಲಿನ ನಿರ್ದೇಶನಗಳಲ್ಲಿ ಈವರೆಗೂ ಪಾಲಿಸದಿರಲು ಕಾರಣವೇನು? ಎಂಬ ಕುರಿತು ಪ್ರಾದೇಶಿಕ ಆಯುಕ್ತರು ವೈಯಕ್ತಿಕವಾಗಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ನ್ಯಾಯಾಲಯದ ಸ್ಪಷ್ಟ ಆದೇಶವಿದ್ದರೂ, ಅದನ್ನು ಪಾಲಿಸದಿರುವುದು ದುರದೃಷ್ಟಕರ. ಒತ್ತುವರಿ ತೆರವು ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಹಿಂದೆ ನೀಡಿದ್ದ ಆದೇಶದ ಅನುಪಾಲನಾ ವರದಿಯನ್ನು ಸಲ್ಲಿಸಲು ಮುಂದಾಗಿಲ್ಲ. ನ್ಯಾಯಾಲಯದ ಸೂಚನೆಯಂತೆ ಕಾರ್ಯ ನಿರ್ವಹಿಸದಿರುವುರು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಪೀಠ ಎಚ್ಚರಿಸಿತು.
ಇದೇ ವೇಳೆ, ರಾಷ್ಟ್ರೀಯ ಸ್ಮಾರಕವಾಗಿರುವ ಕೋಟೆಯ ಸಂರಕ್ಷಣೆ ಮತ್ತು ಅದು ಹಾಳಾಗುವುದನ್ನು ತಡೆಯುವುದಕ್ಕಾಗಿ ಕೈಗೊಂಡಿರುವ ಕ್ರಮಗಳ ಕುರಿತಂತೆ ವಿವರವಾದ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿತು.