ಬೆಂಗಳೂರು: ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರನ್ನು ನೇಮಿಸಿ ಜನವರಿ 30ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇಂದು ಮಾರ್ಚ್ 5ಕ್ಕೆ ಮುಂದೂಡಿತು.
ಸುಪ್ರೀಂ ಕೋರ್ಟ್ ನಿಯಮಗಳನ್ನು ಉಲ್ಲಂಘಿಸಿ ಮಾಹಿತಿ ಆಯುಕ್ತರ ನೇಮಕ ಮಾಡಲಾಗಿದೆ ಎಂದು ಆರೋಪಿಸಿ ಮಾಹಿತಿ ಆಯುಕ್ತರ ಹುದ್ದೆಯ ಆಕಾಂಕ್ಷಿ ಮಲ್ಲಿಕಾರ್ಜುನ ರಾಜು ಎಂಬವರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ನ್ಯಾಯಪೀಠ, ವಿಚಾರಣೆ ಮುಂದೂಡಿದೆ.
ಅಂಜಲಿ ಭಾರದ್ವಾಜ್ ಮತ್ತು ಇತರರ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಾಹಿತಿ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ವಿಚಾರದ ಕುರಿತು ವಿಚಾರಣೆ ನಡೆಸುತ್ತಿದ್ದು, ಈ ಅರ್ಜಿ ಮಾರ್ಚ್ 4ಕ್ಕೆ ವಿಚಾರಣೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಮಾರ್ಚ್ 5ಕ್ಕೆ ಮುಂದೂಡುವುದಾಗಿ ಪೀಠ ತಿಳಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅಶೋಕ್ ಪಾಟೀಲ್, ''ಅಂಜಲಿ ಭಾರದ್ವಾಜ್ ಮತ್ತು ಇತರರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಹುದ್ದೆಗಳಿಗೆ ನೇಮಕಾತಿ ಮಾಡುವ ಮೊದಲು ಶೋಧನಾ ಸಮಿತಿಯನ್ನು ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್ ನೇಮಕಾತಿ ಮಾಡಿದ ರಾಜ್ಯ ಸರ್ಕಾರಕ್ಕೆ ಅನುಸರಣಾ ವರದಿಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದೆ'' ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ:ರಾಜ್ಯ ಸರ್ಕಾರ 2024ರ ಜೂನ್ 11ರಂದು ಓರ್ವ ಮುಖ್ಯ ಮಾಹಿತಿ ಆಯುಕ್ತರು ಮತ್ತು ಒಂದು ಮಾಹಿತಿ ಆಯುಕ್ತರ ಹುದ್ದೆಗೆ ಮಾತ್ರ ಅರ್ಜಿ ಆಹ್ವಾನಿಸಿತ್ತು. ಆದರೆ, ಸಿಐಸಿ ಮತ್ತು ಏಳು ಮಾಹಿತಿ ಆಯುಕ್ತರನ್ನು ನೇಮಕ ಮಾಡಲಾಗಿದೆ. ಇಲ್ಲಿ ಎರಡು ಅಧಿಸೂಚನೆಗಳನ್ನು ಒಟ್ಟುಗೂಡಿಸಿ ಶೋಧನಾ ಸಮಿತಿ ಇಲ್ಲದೇ ನೇಮಕಾತಿ ಮಾಡಲಾಗಿದೆ. ಹಾಗಾಗಿ, ನೇಮಕ ರದ್ದುಪಡಿಸಬೇಕು ಎಂದು ಕೋರಿ ರಾಜ್ಯ ಮಾಹಿತಿ ಆಯುಕ್ತರ ಹುದ್ದೆಯ ಆಕಾಂಕ್ಷಿಯಾಗಿದ್ದ ಜೆ.ಪಿ.ನಗರದ ನಿವಾಸಿ ಕೆ.ಮಲ್ಲಿಕಾರ್ಜುನ ರಾಜು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ವೇಳೆ, ನಿವೃತ್ತ ಐಎಎಸ್ ಅಧಿಕಾರಿ ಆತಿಶ್ ಮೋಹನ್ ಪ್ರಸಾದ್ ಮತ್ತು ಮಾಹಿತಿ ಆಯುಕ್ತರನ್ನಾಗಿ ಕೆ.ರಾಮನ್, ಡಾ.ಹರೀಶ್ ಕುಮಾರ್, ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ.ಚನ್ನಾಳ, ಎಸ್.ರಾಜಶೇಖರ, ಕೆ.ಬದ್ರುದ್ದೀನ್ ಮತ್ತು ಬಿ.ಆರ್.ಮಮತಾ ನೇಮಕ ಮಾಡಿರುವುದಕ್ಕೆ ಮಧ್ಯಂತರ ಪರಿಹಾರದ ಭಾಗವಾಗಿ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಇದಕ್ಕೆ ಆಕ್ಷೇಪಿಸಿದ್ದ ಸರ್ಕಾರ, ''ಸುಪ್ರೀಂ ಕೋರ್ಟ್ ಶೋಧನಾ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕೆಂದು ಹೇಳಿಲ್ಲ. ಬದಲಿಗೆ ಶೋಧನಾ ಸಮಿತಿ ರಚಿಸುವುದು ಸೂಕ್ತ ಎಂದಷ್ಟೇ ಹೇಳಿದೆ. ಹಾಗಾಗಿ, ಶೋಧನಾ ಸಮಿತಿ ರಚನೆ ಮಾಡಿರಲಿಲ್ಲ. ಅರ್ಜಿದಾರರು ಮಾಹಿತಿ ಆಯುಕ್ತರ ಹುದ್ದೆಗೆ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ, ಅವರು ಇಲ್ಲಿತಮ್ಮ ಅರ್ಹತೆ ಬಗ್ಗೆ ವಕಾಲತ್ತು ವಹಿಸಬಹುದೇ ಹೊರತು ತಡೆಯಾಜ್ಞೆ ನೀಡುವಂತೆ ಮನವಿ ಮಾಡುವಂತಿಲ್ಲ. ಜೊತೆಗೆ, ನೇಮಕದಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ಹಾಗಾಗಿ, ಅರ್ಜಿ ತಿರಸ್ಕರಿಸಬೇಕು'' ಎಂದು ಕೋರಿತ್ತು.
ಇದನ್ನೂ ಓದಿ:ಉದಯಗಿರಿ ಠಾಣೆ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ: ಷರತ್ತಿನ ಅನುಮತಿ ನೀಡಿದ ಹೈಕೋರ್ಟ್; ಹೀಗಿವೆ ಷರತ್ತುಗಳು!