ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಗರಣದಲ್ಲಿ ಪೊಲೀಸ್ ತನಿಖೆ ಎದುರಿಸಿದ್ದ ವಕೀಲೆ ಎಸ್.ಜೀವಾ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವಿವರಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ತಮ್ಮ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಎಸ್.ಜೀವಾ 2023ರ ಆಗಸ್ಟ್ 24ರಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. 2024ರ ನವೆಂಬರ್ 11ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಜೀವಾ ಅವರು ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ತನಿಖಾಧಿಕಾರಿಗಳ ಮುಂದೆ ನ.14ರಂದು ಹಾಜರಾಗಿ ತನಿಖೆಗೆ ಸಹಕಾರ ನೀಡಬೇಕು. ವಿಚಾರಣಾ ಪ್ರಕ್ರಿಯೆಯನ್ನು ವಿಡಿಯೋಗ್ರಾಫ್ ಮಾಡಿ, ವರದಿಯನ್ನು ಕೋರ್ಟ್ಗೆ ಸಲ್ಲಿಸಬೇಕು ಎಂದು ಆದೇಶಿಸಿತ್ತು.
ಆದರೆ, ನವೆಂಬರ್ 22ರಂದು ಮುಂಜಾನೆ ಜೀವಾ ಅವರು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯನ್ನು ಖಂಡಿಸಿರುವ ಬೆಂಗಳೂರು ವಕೀಲರ ಸಂಘವು ಜೀವಾ ಅರ್ಜಿಗೆ ಮಧ್ಯಂತರ ಅರ್ಜಿ ಸಲ್ಲಿಸಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಕೋರಿತ್ತು.
ಈ ಮಧ್ಯಂತರ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಪ್ರಕರಣ ಕುರಿತ ತನಿಖೆಯ ಸಮಗ್ರ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ಅವರಿಗೆ ಸೂಚಿಸಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ವಕೀಲರ ಸಂಘದ ಪರ ವಾದ:ಇದಕ್ಕೂ ಮುನ್ನ ಬೆಂಗಳೂರು ವಕೀಲರ ಸಂಘದ ಪರ ಅದರ ಅಧ್ಯಕ್ಷರೇ ಆದ ಹಿರಿಯ ವಕೀಲ ವಿವೇಕ್ ಎಸ್.ಸುಬ್ಬಾರೆಡ್ಡಿ ನ್ಯಾಯಪೀಠದ ಮುಂದೆ ಹಾಜರಾಗಿ, ''ಪೊಲೀಸರ ಕಿರುಕುಳ ತಾಳಲಾರದೇ ವಕೀಲೆ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾಗುವ ಮುನ್ನ ಜೀವಾ 11 ಪುಟಗಳ ಡೆತ್ನೋಟ್ ಬರೆದಿದ್ದಾರೆ. ಸಿಐಡಿ ತನಿಖಾಧಿಕಾರಿಯು ಜೀವಾ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು'' ಎಂದು ಕೋರಿದರು.
ಮಧ್ಯಂತರ ಅರ್ಜಿಯಲ್ಲಿ ಪ್ರಮಾಣಪತ್ರ ಸಲ್ಲಿಸಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು, ''ಜೀವಾ ವಕೀಲರಾಗಿದ್ದಾರೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ಸಿಐಡಿಯ ಡಿವೈಎಸ್ಪಿ ಕನಕಲಕ್ಷ್ಮೀ ಮುಂದೆ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ನಂತರ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ 11 ಪುಟಗಳ ಡೆತ್ನೋಟ್ ಬರೆದಿದ್ದಾರೆ. ಸಹೋದರಿಗೆ ಪ್ರತ್ಯೇಕವಾಗಿ 2 ಪುಟಗಳ ಪತ್ರ ಬರೆದಿದ್ದಾರೆ. ಅದರಲ್ಲಿ ತನಿಖಾಧಿಕಾರಿ ತಮಗೆ ಕಿರುಕುಳ ನೀಡಿದ್ದಾರೆ. ಅದರಿಂದ ತೀವ್ರ ಅವಮಾನವಾಗಿದ್ದು, ಈ ನೋವು ತಾಳಲಾರದೇ ಆತ್ಮಹತ್ಯೆಗೆ ಮಾಡಿಕೊಳ್ಳಲಾಗುತ್ತಿದೆ'' ಎಂಬುದಾಗಿ ಬರೆದಿರುವುದಾಗಿ ವಿವರಿಸಿದರು.
ತನಿಖೆ ಸಿಬಿಐಗೆ ವರ್ಗಾಯಿಸಲು ಆಗ್ರಹ:''ಡೆತ್ನೋಟ್ ಆಧರಿಸಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕನಕಲಕ್ಷ್ಮೀ ಅವರು ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದು, ತನ್ನ ಅಧೀನ ಅಧಿಕಾರಿಗಳ ಮೇಲೆ ಪ್ರಭಾವ ಬೀರಬಹುದು. ರಾಜ್ಯ ಪೊಲೀಸರು ತನಿಖೆ ನಡೆಸಿದರೆ ಕನಕಲಕ್ಷ್ಮೀ ತಮ್ಮ ರಕ್ಷಣೆಗೆ ಹಾಗೂ ತನಿಖೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬಹುದು. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಆದೇಶಿಸಬೇಕು'' ಎಂದು ಹೈಕೋರ್ಟ್ಗೆ ಮನವಿ ಮಾಡಿದರು.
ಇದನ್ನೂ ಓದಿ:ವಾಹನಕ್ಕೆ ಟ್ರ್ಯಾಕಿಂಗ್ ಸಿಸ್ಟಂ, ಪ್ಯಾನಿಕ್ ಬಟನ್ ಕಡ್ಡಾಯ ಪ್ರಶ್ನಿಸಿ ಅರ್ಜಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್