ಕರ್ನಾಟಕ

karnataka

ETV Bharat / state

ದ್ವಿಚಕ್ರ ವಾಹನದಲ್ಲಿ ಹಿಂಬದಿ ಕೂರುವ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಕೋರಿ ಅರ್ಜಿ: ವಿವರಣೆ ಕೇಳಿದ ಹೈಕೋರ್ಟ್ - HELMET MANDATORY FOR CHILDREN

ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳಿತುಕೊಳ್ಳುವ ಮಕ್ಕಳು ಹೆಲ್ಮೆಟ್ ಧರಿಸುವುದು ಕಡ್ಡಾಯವಿದ್ದರೂ ಈವರೆಗೆ ಜಾರಿ ಮಾಡಿಲ್ಲ ಎಂದು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ.

ಹೈಕೋರ್ಟ್, ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ
ಹೈಕೋರ್ಟ್ (ETV Bharat)

By ETV Bharat Karnataka Team

Published : Jan 30, 2025, 8:01 AM IST

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ(PIL) ಸಂಬಂಧಿಸಿದಂತೆ ವಿವರವಾದ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ಸೂಚನೆ ನೀಡಿದೆ.

ಶಿವಮೊಗ್ಗದ ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜಿನ ಸಹ ಪ್ರಾಧ್ಯಾಪಕಿ ಮತ್ತು ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಅರ್ಚನಾ ಭಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ.ಅರುಣ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮಾರ್ಚ್ 11ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 9 ತಿಂಗಳಿನಿಂದ 4 ವರ್ಷದ ಹಿಂಬದಿ ಸವಾರಿ ಮಾಡುವ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ. ಕೇಂದ್ರ ಮೋಟಾರು ವಾಹನ (ಎರಡನೇ ತಿದ್ದುಪಡಿ) ನಿಯಮಗಳು, 2022 ರ ನಿಯಮ 138 (7)ರ ಪ್ರಕಾರ ಸುರಕ್ಷತಾ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಆದರೆ, ಅದನ್ನು ಈವರೆಗೂ ಜಾರಿ ಮಾಡಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಭಾರತದಲ್ಲಿ ರಸ್ತೆ ಅಪಘಾತಗಳಿಗೆ ಸಂಬಂಧಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಪ್ರಕಟವಾಗಿರುವ 2021ರ ವರದಿ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಟ್ಟು 7,744 ಜನರು ರಸ್ತೆ ಅಪಘಾತಗಳಿಗೆ ಬಲಿಯಾಗಿದ್ದಾರೆ. ಅಂದರೆ ಪ್ರತಿದಿನ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸರಾಸರಿ 21 ಜನರು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ವೀಲಿಂಗ್ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸ್ ಕ್ರಮಕ್ಕೆ ಹೈಕೋರ್ಟ್ ಕಿಡಿ: ಬೆಂಗಳೂರು ನಗರದಲ್ಲಿ ವೀಲಿಂಗ್ ಸರ್ವೇಸಾಮಾನ್ಯವಾಗಿದೆ. ನಗರದ ಕೆಲವು ಪ್ರದೇಶಗಳಲ್ಲಿ, ಇಪ್ಪತ್ತರ ಹರೆಯದ ಯುವಕರು ಸ್ಕೂಟರ್ ಅಥವಾ ಮೋಟಾರ್ ಬೈಕ್‌ನಲ್ಲಿವೀಲಿಂಗ್ ಮಾಡುವುದನ್ನು ನಾವು ನೋಡುತ್ತೇವೆ. ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಈ ಬಗ್ಗೆ ಸರ್ಕಾರ ಏನು ಮಾಡುತ್ತಿದೆ? ಎಂದು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ಐ.ಅರುಣ್ ಪ್ರಶ್ನಿಸಿದರು.

ದ್ವಿಚಕ್ರ ವಾಹನದಲ್ಲಿ ಕುಳಿತುಕೊಳ್ಳುವ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಕುರಿತಂತೆ ವಿವರವಾದ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯ ಮತ್ತು ಸವಾರನಿಗೆ ಬಿಗಿಯಾಗಿ ಅಂಟಿಕೊಂಡು ಕೂರುವಂತಹ ಸುರಕ್ಷತಾ ಸಾಧನೆ ಬಳಸುವ ಕುರಿತು ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ: ಪರಸ್ಪರ ಹೆಲ್ಮೆಟ್ ಧರಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡ ಯುವ ಜೋಡಿ! ಇದಕ್ಕೆ ಕಾರಣ ಕುಟುಂಬದಲ್ಲಿ ನಡೆದ ದುರಂತ

ABOUT THE AUTHOR

...view details