ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಒಳಗೊಂಡ ದೃಶ್ಯಗಳನ್ನು ಪೆನ್ಡ್ರೈವ್ನಲ್ಲಿ ನಕಲಿಸಿ ಅವುಗಳನ್ನು ಇತರರಿಗೆ ಹಂಚಿಕೆ ಮಾಡಿರುವುದು ಅತ್ಯಂತ ಅಪಾಯಕಾರಿ ಮತ್ತು ಪಾಪದ ಕೆಲಸ ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿತು.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಪೆನ್ಡ್ರೈವ್ ವಿತರಣೆ ಸಂಬಂಧ ಪ್ರಮುಖ ಆರೋಪಿ ಎನ್ನಲಾದ ಶರತ್ ಎಂಬವರು ತಮ್ಮ ವಿರುದ್ಧದ ಪ್ರಕರಣ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ನಡೆಸಿತು.
ಇಂತಹ ವಿಚಾರಗಳಲ್ಲಿ ಪುರುಷ ಏನೂ ಕಳೆದುಕೊಳ್ಳುವುದಿಲ್ಲ. ಆದರೆ ಮಹಿಳೆಯನ್ನು ಮಂದ ಬೆಳಕಿನಲ್ಲಿ ಕೆಟ್ಟದಾಗಿ ಚಿತ್ರಿಸುವುದರಿಂದ ಆಕೆ ಅಪಮಾನಕ್ಕೆ ಒಳಗಾಗುತ್ತಾಳೆ. ಪ್ರಕರಣದಲ್ಲಿ ಸದ್ಯಕ್ಕೆ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ. ಆರೋಪಿ ತನಿಖಾಧಿಕಾರಿಗಳ ಮುಂದೆ ಹಾಜರಾಗಲಿ ಎಂದು ಪೀಠ ಹೇಳಿತು.
ಇದಕ್ಕೆ ಆರೋಪಿ ಪರ ವಕೀಲರು, ಹಾಗಿದ್ದರೆ ಬಂಧಿಸದಂತೆ ಆದೇಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ನ್ಯಾಯಪೀಠ, ಈ ನ್ಯಾಯಾಲಯವನ್ನು ಜಾಮೀನು ಕೋರ್ಟನ್ನಾಗಿ ಪರಿವರ್ತಿಸಬೇಡಿ. ಮೊದಲು ನಿರೀಕ್ಷಣಾ ಅಥವಾ ರೆಗ್ಯುಲರ್ ಜಾಮೀನು ಪಡೆದುಕೊಳ್ಳಿ, ಇಲ್ಲವೇ ತನಿಖಾಧಿಕಾರಿ ಮುಂದೆ ಹಾಜರಾಗಿ. ಅಲ್ಲಿಯವರೆಗೆ ನಾವು ಈ ಅರ್ಜಿ ವಿಚಾರಣೆ ನಡೆಸುವುದಿಲ್ಲ ಎಂದು ಹೇಳಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ತನಿಖಾ ವರದಿಯ ವಿವರಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಿ, ಶರತ್ ಪಾತ್ರವನ್ನು ವಿವರಿಸಿದರು. ಅಲ್ಲದೆ ಅವರು ಶರತ್‌ಗೆ ಸೇರಿದ ಜಾಗದಲ್ಲಿ ಎಸ್‌ಐಟಿ ತಂಡ ವಶಪಡಿಸಿಕೊಂಡಿರುವ ಡಿವಿಆರ್ ಜತೆ ಟ್ಯಾಬ್ಲೆಟ್ ಮತ್ತು ಹಲವು ಸಿಡಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಎಂದರು.