ಬೆಂಗಳೂರು:ನಗರದ ಬೀದಿ ನಾಯಿಗಳ ದೇಹದಲ್ಲಿ ಮೈಕ್ರೋಚಿಪ್ ರೀಡರ್ ಅಳವಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಪ್ರಸ್ತಾವನೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ಇಂದು ನಿರಾಕರಿಸಿದೆ.
ಸೇವ್ ಅವರ್ ಅನಿಮಲ್ಸ್ ಚಾರಿಟಬಲ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾ.ಎಂ.ಐ.ಅರುಣ್ ಅವರಿದ್ದ ವಿಭಾಗೀಯ ಪೀಠ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಮಾರ್ಚ್ 20ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ಬೀದಿ ನಾಯಿಗಳಿಗೆ ವ್ಯಾಕ್ಸಿನೇಷನ್ ಹಾಕಿದ ಬಳಿಕ ಅವುಗಳನ್ನು ಪತ್ತೆ ಹಚ್ಚುವ ಸಂದರ್ಭದಲ್ಲಿ ಆಗಬಹುದಾದಂತಹ ಗೊಂದಲಗಳ ನಿವಾರಣೆಗೆ ಮೈಕ್ರೋಚಿಪ್ ಅಳವಡಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಭ್ಯವಿರುವ ಮಾರ್ಗಸೂಚಿಗಳ ಆಧಾರದ ಮೇಲೆ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಪ್ರಾರಂಭಿಸಿದ್ದು, ಈವರೆಗೂ ನಗರದ ಎರಡು ವಾರ್ಡ್ಗಳಲ್ಲಿ ಕೆಲವು ನಾಯಿಗಳಿಗೆ ಅಳವಡಿಸಿದ್ದು, ಇದೊಂದು ಪರಿಣಾಮಕಾರಿ ಎಂಬುದಾಗಿ ತಿಳಿದು ಬಂದಿದೆ. ಈ ಚಿಪ್ ಅಳವಡಿಸುವುದಕ್ಕೆ ಜನನ ನಿಯಂತ್ರಣ ನಿಮಯಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ವಿವರಿಸಿದರು.
ಅಲ್ಲದೆ, ಕೇಂದ್ರ ಸರ್ಕಾರವು ರೇಬೀಸ್ ವಿರೋಧಿ ಕಾರ್ಯಕ್ರಮ ಪ್ರಾರಂಭಿಸಿದೆ ಮತ್ತು 2025ರ ವೇಳೆಗೆ ರೇಬೀಸ್ ನಿರ್ಮೂಲನೆ ಮಾಡುವು ಉದ್ದೇಶವನ್ನು ಹೊಂದಿದೆ. ಈ ಗುರಿ ಸಾಧಿಸುವುದಕ್ಕಾಗಿ ನಾಯಿಗಳ ಈ ವ್ಯಾಕ್ಸಿನೇಷನ್ ಹಾಕುತ್ತಿದ್ದು, ಅವುಗಳ ಪತ್ತೆಗೆ ಸಹಕಾರಿಯಾಗವ ಸಲುವಾಗಿ ಚಿಪ್ ಅಳವಡಿಸಲಾಗುತ್ತಿದೆ ಎಂದು ಪೀಠಕ್ಕೆ ಮನವರಿಕೆ ಮಾಡಿದರು.