ಬೆಂಗಳೂರು: ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಗೆ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಕೀಲರಿಗೆ ಮೀಸಲಾತಿ ನೀಡಲು ನಿರಾಕರಿಸಿರುವ ಹೈಕೋರ್ಟ್, ಈ ಸಂಬಂಧ ಸುಪ್ರೀಂಕೋರ್ಟ್ಗೆ ಮಾತ್ರ ಅಧಿಕಾರವಿದೆ ಎಂದು ತಿಳಿಸಿ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ.
ಅಖಿಲ ಭಾರತ ಹಿಂದುಳಿದ ವರ್ಗಗಳ ವಕೀಲರ ಪ್ರತಿಷ್ಠಾನ ಮತ್ತು ಕರ್ನಾಟಕ ಎಸ್ಸಿ, ಎಸ್ಟಿ ಹಿಂದುಳಿದ ವರ್ಗಗಳ ವಕೀಲರ ಫೆಡರೇಷನ್ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ನ್ಯಾಯಪೀಠ, ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದೇ ಆದೇಶವನ್ನು ನೀಡಲು ನಿರಾಕರಿಸಿದ್ದು, ಅರ್ಜಿದಾರರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬೆಂಗಳೂರು ವಕೀಲರ ಸಂಘದಲ್ಲಿ ಒಬ್ಬ ಎಸ್ಸಿ ಎಸ್ಟಿ ಸದಸ್ಯರೂ ಇಲ್ಲವಾಗಿದೆ. ಸಂವಿಧಾನ ರಕ್ಷಣೆ ಮಾಡಬೇಕಾದ ನಮ್ಮಲ್ಲಿಯೇ ಹೀಗಾದರೆ ಹೇಗೆ? ಈ ವರ್ಗದ ವಕೀಲರಿಗೆ ದೀಪದ ನೆರಳಲ್ಲಿ ಕತ್ತಲು ಎಂಬಂತಾಗಿದೆ. ಹೀಗಾಗಿ ಎಸ್ಸಿ, ಎಸ್ಟಿ ವಕೀಲರಿಗೆ ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ನ್ಯಾಯಪೀಠ, ಈ ಹಿಂದೆ ಮಹಿಳಾ ಸದಸ್ಯರಿಗೆ ಮೀಸಲಾತಿ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾಗಿದ್ದ ವಿವೇಕ್ ಸುಬ್ಬಾರೆಡ್ಡಿ, ಹಾಜರಾಗಿ ಪ್ರಸ್ತುತ ಸಂಘದ ಅವಧಿ ಮುಗಿದಿದ್ದು, ತಾನು ಪ್ರಸ್ತುತ ಹಂಗಾಮಿ ಅಧ್ಯಕ್ಷನಾಗಿದ್ದೇನೆ. ಈ ಹಂತದಲ್ಲಿ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳಾ ವಕೀಲರಿಗೆ ಮೀಸಲಾತಿ ನೀಡುವ ಸಂಬಂಧ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಅದೇ ಅರ್ಜಿ ವಿಚಾರಣೆ ವೇಳೆ ನಿಮ್ಮ ಮನವಿಯನ್ನು ಸಲ್ಲಿಸಬಹುದಾಗಿತ್ತು ಎಂದು ತಿಳಿಸಿತು.
ವಾದ ಮುಂದುವರೆಸಿದ ವಕೀಲರು, ವಕೀಲರ ಸಂಘದಲ್ಲಿ 22 ಸಾವಿರ ಸದಸ್ಯರಿದ್ದಾರೆ. ಇದರಲ್ಲಿ ಎರಡು ಸ್ಥಾನಗಳನ್ನು ಹಿಂದುಳಿದ ವರ್ಗ ಮತ್ತು ಎಸ್ಸಿ, ಎಸ್ಟಿಗೆ ಮೀಸಲಿಟ್ಟಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಮಹಿಳಾ ವಕೀಲರಿಗೆ ಮೀಸಲಾತಿ ನೀಡಿದಲ್ಲಿ 25 ವರ್ಷಗಳಿಂದ ಮೀಸಲಾತಿಯಿಂದ ವಚಿತರಾಗಿರುವ ಎಸ್ಸಿ/ಎಸ್ಟಿ ವಕೀಲರು ತಮ್ಮ ಹಕ್ಕು ಕೇಳುವುದು ತಪ್ಪೇ? ಎಂದು ಪೀಠಕ್ಕೆ ತಿಳಿಸಿದರು.
ಸಂವಿಧಾನದ 226ನೇ ವಿಧಿಯಲ್ಲಿ ಹೈಕೋರ್ಟ್ಗೆ ಈ ರೀತಿಯ ಆದೇಶ ನೀಡುವ ಅಧಿಕಾರ ಇದೆ. ವಕೀಲರ ಸಂಘ ಸಂವಿಧಾನ ಪರಿಚ್ಛೇದ 14(ಸಮಾನತೆ)ಯನ್ನು ಉಲ್ಲಂಘಿಸಿದೆ. ಹೀಗಾಗಿ ಆಡಳಿತ ಮಂಡಳಿಗೆ ನಿರ್ದೇಶನ ನೀಡಬಹುದಾಗಿದೆ ಎಂದು ಮನವಿ ಮಾಡಿದರು.
ಹಿಂದುಳಿದ ವರ್ಗಗಳ ಪರ ವಾದ ಮಂಡಿಸಿದ ವಕೀಲರು, ಜನವರಿ 24ರಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದ ಬಳಿಕ ಮಹಿಳಾ ವಕೀಲರಿಗೆ ಮೀಸಲಾತಿ ಕಲ್ಪಿಸುವ ನಿರ್ಣಯವನ್ನು ಎಎಬಿ ಜಾರಿಗೊಳಿಸಿದೆ. ಈ ನಿರ್ಣಯ ಜಾರಿಗೊಳಿಸುವುದಕ್ಕೂ ಮುನ್ನ ನಾವು ಮನವಿ ಸಲ್ಲಿಸಿದ್ದೇವೆ. ಮಹಿಳೆಯರ ವಿಚಾರದಲ್ಲಿ ಮೀಸಲಾತಿ ಒಪ್ಪಿಕೊಳ್ಳುವುದಾದರೆ ಎಸ್‌ಸಿ/ಎಸ್ಟಿ ವಕೀಲರಿಗೆ ಏಕೆ ಮೀಸಲಾತಿ ಕಲ್ಪಿಸಬಾರದು? ಎಂದು ಪೀಠಕ್ಕೆ ವಿವರಿಸಿದರು.
ಅರ್ಜಿದಾರರ ಪರ ಮತ್ತೊಬ್ಬ ವಕೀಲರು, ಎಎಬಿ ಸದಸ್ಯರಾಗಿರುವವರಲ್ಲಿ ಶೇ. 75ರಷ್ಟು ವಕೀಲರು ಎಸ್‌ಸಿ/ಎಸ್‌ಟಿ, ಒಬಿಸಿ ಸಮುದಾಯವರಾಗಿದ್ದಾರೆ. ಆದರೆ, ಎರಡು ಸೀಟುಗಳಿಗೆ ನಾವು ಮನವಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯ ವರ್ಗದವರ ಜೊತೆ ಸ್ಪರ್ಧಿಸುವ ಮಟ್ಟದಲ್ಲಿ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಸಮುದಾಯದ ವಕೀಲರು ಇಲ್ಲ. ಎಎಬಿ ಅಸ್ತಿತ್ವಕ್ಕೆ ಬಂದು 57 ವರ್ಷಗಳಾಗಿದ್ದು, ಇದುವರೆಗೆ ಎಸ್‌ಸಿ/ಎಸ್‌ಟಿ, ಒಬಿಸಿ ವರ್ಗದಿಂದ ಸದಸ್ಯರಾಗಿಲ್ಲ ಎಂದು ವಾದ ಮಂಡಿಸಿದರು.
ಪೆಬ್ರುವರಿ 16ರ ಚುನಾವಣೆಗೆ ನಾಮ ಪತ್ರ ಸಲ್ಲಿಕೆ :ಬೆಂಗಳೂರು ವಕೀಲರ ಸಂಘದ 2025-28ನೇ ಸಾಲಿನ ಆಡಳಿತ ಮಂಡಳಿಯ ಆಯ್ಕೆಗೆ ಫೆಬ್ರವರಿ 16ಕ್ಕೆ ಚುನಾವಣೆ ನಿಗದಿಪಡಿಸಿರುವ ಉನ್ನತಾಧಿಕಾರ ಸಮಿತಿ ಮತ್ತು ಮುಖ್ಯ ಚುನಾವಣಾ ಅಧಿಕಾರಿಯು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದಾರೆ.
ಸಿಟಿ ಸಿವಿಲ್ ಕೋರ್ಟ್‌ನ ವಕೀಲರ ಭವನದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶನಿವಾರದಿಂದ (ಫೆ.1) ಆರಂಭವಾಗಿದ್ದು (ಖಜಾಂಚಿ ಹುದ್ದೆಗೆ ಸ್ಪರ್ಧಿಸಿದ್ದ ಪುರುಷ ಅಭ್ಯರ್ಥಿಗಳನ್ನು ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಹುದ್ದೆಯ ಸ್ಪರ್ಧೆಗೆ ಮಾತ್ರ ವರ್ಗಾಯಿಸಲಾಗುತ್ತದೆ) ನಾಮಪತ್ರ ಸಲ್ಲಿಕೆಗೆ ಫೆಬ್ರವರಿ 2 (ಸಂಜೆ 4 ಗಂಟೆ) ಕೊನೆಯ ದಿನವಾಗಿದೆ. ಫೆಬ್ರವರಿ 4ರಂದು ನಾಮಪತ್ರಗಳ ಪರಿಶೀಲನೆ ನಡೆಸಿ, ಸಂಜೆ ವೇಳೆಗೆ ಸಿಂಧುವಾದ ಉಮೇದುವಾರಿಕೆ ಪ್ರಕಟಿಸಲಾಗುತ್ತದೆ. ಫೆಬ್ರವರಿ 6 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಫೆಬ್ರವರಿ 16ರಂದು ಮತದಾನ ನಡೆಯಲಿದ್ದು, ಅಂದೇ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ಇದನ್ನೂ ಓದಿ:4,600ಕ್ಕೂ ಹೆಚ್ಚು ಪ್ರಕರಣ ಇತ್ಯರ್ಥಪಡಿಸಿದ ಹೈಕೋರ್ಟ್ ನ್ಯಾಯಮೂರ್ತಿ ಶಿವಶಂಕರೇಗೌಡರಿಗೆ ಬೀಳ್ಕೊಡುಗೆ