ಬೆಂಗಳೂರು: ಸಾರ್ವಜನಿಕ ಶೌಚಾಲಯದಲ್ಲಿ ಮಹಿಳೆಯೊಬ್ಬರ ಮೊಬೈಲ್ ಸಂಖ್ಯೆಯೊಂದಿಗೆ 'ಬೆಲೆವೆಣ್ಣು'(ಕಾಲ್ ಗರ್ಲ್) ಎಂಬುದಾಗಿ ಬರೆಯುವುದು ಆ ಮಹಿಳೆಯ ಘನತೆ ಕುಗ್ಗಿಸಿದ್ದಲ್ಲದೇ, ಮಾನಸಿಕ ಹಿಂಸೆ ನೀಡಿದಂತೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಈ ರೀತಿಯ ಕೃತ್ಯದಲ್ಲಿ ತೊಡಗಿದ್ದ ಆರೋಪಿಯ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿತು.
ತಮ್ಮ ವಿರುದ್ಧ ಉಪ್ಪಾರಪೇಟೆ ಪೊಲೀಸರು ದಾಖಲಿಸಿದ್ದ ಪ್ರಕರಣದ ಮತ್ತದರ ಕುರಿತ ವಿಚಾರಣೆ ರದ್ದು ಕೋರಿ ಚಿತ್ರದುರ್ಗದ ನಿವಾಸಿ ಅಲ್ಲ ಬಕಾಶ್ ಪಾಟೀಲ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಅರ್ಜಿದಾರರ ವಿರುದ್ಧದ ಆರೋಪಪಟ್ಟಿ ರದ್ದುಪಡಿಸಲು ನಿರಾಕರಿಸಿದೆ.
ಮಹಿಳೆಯ ಗೌಪ್ಯತೆಯನ್ನು ಬಹಿರಂಗಪಡಿಸುವುದು ಆಕೆಗೆ ವೈಯಕ್ತಿಕವಾಗಿ ಗಂಭೀರ ಮಾನಸಿಕ ಹಾನಿ ಉಂಟುಮಾಡುತ್ತದೆ. ಅಲ್ಲದೆ, ಮಹಿಳೆಯ ಆತ್ಮಕ್ಕೆ ಬಲವಾದ ಗಾಯ ಮಾಡುತ್ತದೆ. ಇದು ದೈಹಿಕ ಹಾನಿಗಿಂತಲೂ ಹೆಚ್ಚಿನ ನೋವು ನೀಡುತ್ತದೆ. ಮಹಿಳೆಯ ವಿರುದ್ಧ ಇಂಥ ಕೃತ್ಯಗಳಲ್ಲಿ ಭಾಗಿಯಾಗುವುದು ಆಘಾತಕಾರಿ ಅನುಭವಕ್ಕೆ ಒಳಗಾಗುವಂತೆ ಮಾಡುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಅರ್ಜಿದಾರರು ಮಾಡಿರುವ ಕೃತ್ಯ, ಮಹಿಳೆಯ ಕುರಿತು ಅಸಭ್ಯವಾಗಿ ಬರೆದು, ಸಾರ್ವಜನಿಕರು ಕರೆ ಮಾಡಿ ಅಸಭ್ಯವಾಗಿ ಮಾತನಾಡಲು ಪ್ರಚೋದನಕಾರಿಯಾಗಿಸುವ ಮೂಲಕ ಆಕೆಯ ಘನತೆಯನ್ನು ಕುಗ್ಗಿಸುವಂತೆ ಮಾಡುತ್ತದೆ. ಪ್ರಸ್ತುತ ಡಿಜಿಟಲ್ ಯುಗದಲ್ಲಿ ದೈಹಿಕವಾಗಿ ಹಾನಿಯುಂಟು ಮಾಡಬೇಕಾದ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆಗಳು, ಚಿತ್ರಗಳು ಅಥವಾ ವಿಡಿಯೋಗಳನ್ನು ಪ್ರಸಾರ ಮಾಡುವ ಮೂಲಕ ಮಹಿಳೆಯ ಘನತೆಗೆ ಧಕ್ಕೆಯಾಗುವಂತೆ ಮಾಡಬಹುದಾಗಿದೆ. ಆದ್ದರಿಂದ ಅಂತಹ ಪ್ರಕರಣಗಳಲ್ಲಿ ಆರೋಪಿಗಳು ಪ್ರಕರಣ ರದ್ದು ಕೋರಿ ನ್ಯಾಯಾಲಯದ ಮುಂದೆ ಬಂದಲ್ಲಿ, ನ್ಯಾಯಾಲಯ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಪೀಠ ಹೇಳಿದೆ.
ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಅತ್ಯಂತ ಅಮಾನವೀಯ ಕೃತ್ಯ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಮಹಿಳೆಯ ಖಾಸಗಿತನದ ಹಕ್ಕಿನ ಮೇಲೆ ಅತಿಕ್ರಮಣವಾಗಿದೆ. ಈ ರೀತಿಯ ಕೃತ್ಯ ಸಮರ್ಥನೆ ಮಾಡುವಂಥದ್ದಲ್ಲ. ಈ ಪ್ರಕರಣಗಳನ್ನು ಕಠಿಣವಾಗಿ ಪರಿಗಣಿಸಬೇಕು. ಅರ್ಜಿದಾರರ ಕೃತ್ಯ, ಸಾರ್ವಜನಿಕವಾಗಿ ಮಹಿಳೆಯ ಕುರಿತು ಕೀಳು ಮಟ್ಟದ ಟೀಕೆಗಳು ಮಾಡುವ ಅವಮಾನಿಸಲು ಕಾರಣರಾಗಿದ್ದಾರೆ. ಈ ರೀತಿಯ ಆರೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.