ಬೆಂಗಳೂರು:ಕಳೆದ ವಿಧಾನಸಭೆ ಚುನಾವಣೆ ವೇಳೆ ಚುನಾವಣಾ ಅಕ್ರಮ ನಡೆಸಿದ ಆರೋಪದ ಮೇಲೆ ನಿಪ್ಪಾಣಿ ಶಾಸಕಿ ಹಾಗೂ ಮಾಜಿ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ರದ್ದು ಕೋರಿ ಶಶಿಕಲಾ ಜೊಲ್ಲೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ. ಪ್ರಕರಣ ಸಂಬಂಧ ಶಶಿಕಲಾ ಜೊಲ್ಲೆ ವಿರುದ್ಧ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್, ಅದನ್ನು ಆಧರಿಸಿ ತನಿಖೆ ನಡೆಸಿ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿ ಮತ್ತು ಈ ಬಗ್ಗೆ ನಿಪ್ಪಾಣಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಪಡಿಸಿ ಆದೇಶಿಸಲಾಗಿದೆ.
ಅಲ್ಲದೇ, ಐಪಿಸಿ 171(ಬಿ) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123(1) ಆಧರಿಸಿ ಲಂಚ ಮತ್ತು ಆಮಿಷದ ಆರೋಪ ಮಾಡಲಾಗಿದೆ. ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಅಂಶಗಳು ಮತ್ತು ಯಾವ ಘಟನೆ ಆಧರಿಸಿ ಪ್ರಕರಣ ದಾಖಲಿಸಿಲಾಗಿದೆಯೋ ಆ ಸಂದರ್ಭದ ಘಟನಾವಳಿಗಳನ್ನು ಗಮನಿಸಿದಾಗ ಅದ್ಯಾವುದೂ ಲಂಚ ಅಥವಾ ಆಮಿಷ ಆಗುವುದಿಲ್ಲ. ಏಕೆಂದರೆ ಐಪಿಸಿ ಸೆಕ್ಷನ್ 171(ಬಿ) ಪ್ರಕಾರ ಕೊಡುವ ಕೈ ಹಾಗೂ ತೆಗೆದುಕೊಳ್ಳುವ ಕೈ ಇದ್ದಾಗ ಮಾತ್ರ ಅದು ಲಂಚವಾಗುತ್ತದೆ. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123(1) ಪ್ರಕಾರ ಉಚಿತ ಉಡುಗೊರೆ, ಆಮಿಷ ಹಾಗೂ ಭರವಸೆಗಳು ಚುನಾವಣಾ ಅಕ್ರಮವೆನಿಸುತ್ತವೆ. ಈ ಪ್ರಕರಣದಲ್ಲಿ ಅಂತಹ ಆರೋಪಕ್ಕೆ ಪುರಾವೆಗಳು ಲಭ್ಯವಾಗುತ್ತಿಲ್ಲ. ಯಾವುದೇ ಒಬ್ಬ ವ್ಯಕ್ತಿ ತನ್ನ ಬಳಿ ಹಣ ಇಟ್ಟುಕೊಳ್ಳುವುದು ಅಪರಾಧ ಅಥವಾ ಲಂಚ ಎನಿಸಿಕೊಳ್ಳುವುದಿಲ್ಲ. ಹಾಗಾಗಿ, ಕಾನೂನಿನಡಿ ಈ ಪ್ರಕರಣ ಆರೋಪವಾಗುವುದಿಲ್ಲ ಎಂದು ಹೇಳಿದ ನ್ಯಾಯಪೀಠ, ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿತು.