ಬೆಂಗಳೂರು : ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿಗೆ ಭೂ ಸ್ವಾಧೀನ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಸ್ಥಳೀಯ ನಿವಾಸಿ ಗುರುಪ್ರಸಾದ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮತ್ತು ಟಿ.ಜೆ. ಶಿವಶಂಕರ್ ಅವರಿದ್ದ ನ್ಯಾಯಪೀಠ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಯೋಜನೆಯ ಪ್ರಕಾರ ಕಾಮಗಾರಿ ನಡೆದರೆ ದೇವಾಲಯದ ಗೋಡೆಯ 3 ಅಡಿ ಪಕ್ಕದಲ್ಲೇ ಹೆದ್ದಾರಿ ನಿರ್ಮಾಣವಾಗಲಿದೆ. ಹೆದ್ದಾರಿಯಲ್ಲಿ ಪ್ರತಿದಿನ ಅಂದಾಜು 15 ಸಾವಿರ ವಾಹನಗಳು ಹಾದುಹೋಗಲಿವೆ. ಇದರಿಂದ ಸಾವಿರಾರು ವರ್ಷಗಳ ಹಳೆಯ ದೇಗುಲಕ್ಕೆ ಅಪಾಯವಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.