ಬೆಂಗಳೂರು:ಕಾನೂನು ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನ ಮತ್ತು ಸವಾಲಿನ ಮೌಲ್ಯಮಾಪನ (ಚಾಲೆಂಜಿಂಗ್ ವ್ಯಾಲ್ಯೂವೇಷನ್) ಅಂಕಗಳ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಆಗದಂತೆ ಕ್ರಮ ವಹಿಸಲು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪರೀಕ್ಷಾ ಸುಗ್ರೀವಾಜ್ಞೆ 2014 ಅನ್ನು ರದ್ದು ಮಾಡಬೇಕು ಮತ್ತು ಸಂವಿಧಾನ ಕಾನೂನು-1 ವಿಷಯದಲ್ಲಿ ಒಂದು ಅಂಕ ಮತ್ತು ಅಪರಾಧ ಕಾನೂನು-1 ವಿಷಯದಲ್ಲಿ ಮೂರು ಅಂಕಗಳನ್ನು ಮಂಜೂರು ಮಾಡುವಂತೆ ಕೋರಿ ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಲಾ ಮೊದಲ ವರ್ಷದ ಕಾನೂನು ಪದವಿ ಅಧ್ಯಯನ ಮಾಡುತ್ತಿರುವ ಚಿತ್ರದುರ್ಗದ ಯಲಗಟ್ಟೆ ಗೊಲ್ಲರಹಟ್ಟಿ ನಿವಾಸಿ ಜೆ.ಅರ್ಪಿತಾ ಅರ್ಜಿ ಸಲ್ಲಿಸಿದ್ದರು.
ನ್ಯಾಯಪೀಠ ಹೇಳಿದ್ದೇನು?:ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಮರು ಮೌಲ್ಯಮಾಪನಕ್ಕಾಗಿ (500) ಅರ್ಜಿ ಸಲ್ಲಿಸುವವರಿಗೆ ಶೇಕಡಾ 5ರಷ್ಟು ಮತ್ತು ಸವಾಲಿನ ಮೌಲ್ಯಮಾಪನಕ್ಕೆ (2100) ಅರ್ಜಿ ಸಲ್ಲಿಸುವವರಿಗೆ ಶೇಕಡಾ 20ರ ವರೆಗೂ ಅಂಕಗಳನ್ನು ನೀಡುವ ಸಂಬಂಧದ ತಾರತಮ್ಯ ತೆಗೆದುಹಾಕಬೇಕು. ಮರು ಮೌಲ್ಯಮಾಪನದಲ್ಲಿ ಪಡೆದುಕೊಂಡ ಸಂಪೂರ್ಣ ಅಂಕಗಳನ್ನು ಮಂಜೂರು ಮಾಡಬೇಕು ಎಂದು ನ್ಯಾಯಪೀಠ ಹೇಳಿದೆ.
ಜೊತೆಗೆ, ವಿದ್ಯಾರ್ಥಿಗಳಲ್ಲಿನ ತಾರತಮ್ಯಕ್ಕೆ ಕಾರಣವಾಗಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪರೀಕ್ಷಾ ಅಧಿಶಾಸನಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಮುಂದಿನ ಎರಡು ವಾರಗಳಲ್ಲಿ ತಿದ್ದುಪಡಿ ಮಾಡಬೇಕು ಎಂದು ವಿಶ್ವವಿದ್ಯಾಲಯಕ್ಕೆ ನ್ಯಾಯಪೀಠ ನಿರ್ದೇಶನ ನೀಡಿ ಆದೇಶಿಸಿದೆ.
ಇದನ್ನೂ ಓದಿ:ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿ ಬೇರೆ ಕಾರ್ಯಗಳಿಗೆ ಬಳಕೆ: ಹೈಕೋರ್ಟ್ ತೀವ್ರ ತರಾಟೆ - High Court