ಬೆಂಗಳೂರು: ನಗರದ ಪೀಣ್ಯದಲ್ಲಿರುವ ಪ್ಲಾಟಿನಂ ಸಿಟಿ ಅಪಾರ್ಟ್ಮೆಂಟ್ನ 15 ಮಹಡಿಗಳಿರುವ ಎ ಬ್ಲಾಕ್ ಅನ್ನು ತೆರವುಗೊಳಿಸುವುದು ಮತ್ತು ಅಲ್ಲಿ ನೆಲೆಸಿರುವ ನಿವಾಸಿಗಳನ್ನು ಸ್ಥಳಾಂತರ ಮಾಡುವುದಕ್ಕೆ ಸಂಬಂಧಿಸಿದಂತೆ ವಿವರವಾದ ವರದಿ ಸಲ್ಲಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಆಯುಕ್ತರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವಸತಿ ಸಮುಚ್ಚಯಕ್ಕೆ ಸ್ವಾಧೀನಾನುಭವ ಪತ್ರ(ಒಸಿ) ವಿತರಣೆ ಮಾಡುವಂತೆ ಬಿಡಿಎಗೆ ನಿರ್ದೇಶನ ನೀಡಬೇಕು ಎಂದು ಕೋರಿ ಶರೀಫ್ ಕನ್ಸ್‌ಟ್ರಕ್ಷನ್ಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಮಧ್ಯಂತರ ಆದೇಶ ನೀಡಿದೆ.
ಅಲ್ಲದೆ, ಈ ಹಿಂದೆ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿರುವ ಮಹಡಿಗಳನ್ನು ತೆರವುಗೊಳಿಸುವುದಾಗಿ ಅರ್ಜಿದಾರರು ನ್ಯಾಯಪೀಠಕ್ಕೆ ಭರವಸೆ ನೀಡಿದ್ದರು. ಆದರೆ, ಈ ಭರವಸೆಯನ್ನು ಉಲ್ಲಂಘಿಸಿದ್ದಾರೆ. ಇದೀಗ ಕಟ್ಟಡ ಉಳಿಸುವ ಸಂಬಂಧ ಕೋರಿ ಸಲ್ಲಿಸಿರುವ ಪ್ರಮಾಣ ಪತ್ರವನ್ನು ಪರಿಗಣಿಸಲು ಸಾಧ್ಯವಿಲ್ಲ. ಕಾನೂನಿನ ಅಡಿಯಲ್ಲಿನ ನಿಯಮಗಳ ಪ್ರಕಾರ ಕಟ್ಟಡ ನೆಲಸಮ ಮಾಡಬೇಕಾದ ಅಗತ್ಯವಿದೆ. ಕಟ್ಟಡ ನಿರ್ಮಾಣದಲ್ಲಿ ಆಗಿರುವ ಉಲ್ಲಂಘನೆಗಳನ್ನು ಸರಿಪಡಿಸುವುದಕ್ಕೆ ಸಾಧ್ಯವೇ ಇಲ್ಲ ಎಂಬ ಅಂಶಗಳನ್ನು ಬಿಡಿಎ ತಿಳಿಸಿದೆ ಎಂದು ಪೀಠ ಹೇಳಿದೆ.
ಅರ್ಜಿದಾರರು ಮಾಡಿದ ತಪ್ಪುಗಳ ಕಾರಣದಿಂದ ಇಡೀ ಕಟ್ಟಡ ನೆಲಸಮ ಮಾಡಬೇಕಾಗುತ್ತದೆ. ಖರೀದಿದಾರರಿಗೆ ಉಂಟಾದ ಯಾವುದೇ ನಷ್ಟವನ್ನು ಅಪಾರ್ಟ್ಮೆಂಟ್ಗಳ ಮೌಲ್ಯದ ಪ್ರಕಾರ ಅರ್ಜಿದಾರರು ಭರಿಸಬೇಕು. ಜೊತೆಗೆ ಅಂತಹ ಖರೀದಿದಾರರು, ನಿವಾಸಿಗಳಿಗೆ ಉಂಟಾಗುವ ಅನಾನುಕೂಲತೆಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಈ ಕುರಿತ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಪೀಠ ಬಿಡಿಎಗೆ ಸೂಚನೆ ನೀಡಿದೆ.