ಬೆಂಗಳೂರು : ವಿಚ್ಛೇದನ ಪ್ರಕರಣಗಳಲ್ಲಿ ಪತಿಯ ಆದಾಯದಲ್ಲಿ ಶೇಕಡಾ 10ರಷ್ಟನ್ನು ಪತ್ನಿಗೆ ಜೀವನಾಂಶ ನೀಡುವುದು ಹೆಚ್ಚಿನ ಪ್ರಮಾಣ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವಿಚ್ಛೇದಿತ ಪತ್ನಿಗೆ ಮಾಸಿಕ 60 ಸಾವಿರ ಜೀವನಾಂಶ ನೀಡುವಂತೆ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬೆಂಗಳೂರಿನ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪತಿಯ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ಪತಿಗೆ ಮಾಸಿಕ 7 ಲಕ್ಷ ರೂ.ಗಳಿದ್ದಾಗ ಗೃಹಿಣಿಯಾದ ಪತ್ನಿಗೆ 60 ಸಾವಿರ ರೂ.ಗಳ ಜೀವನಾಂಶ ನೀಡುವುದು ಶೇ.10ರಷ್ಟು ಮಾತ್ರ ಆಗಲಿದೆ. ಆದ್ದರಿಂದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದು ಅನಗತ್ಯ ಎಂದು ನ್ಯಾಯಪೀಠ ತಿಳಿಸಿದೆ.
ಪತಿ ತನ್ನ ಅಫಿಡವಿಟ್ ಪ್ರಕಾರ, ವಾರ್ಷಿಕ 87 ಲಕ್ಷ ರೂ.ಗಳನ್ನು ಸಂಪಾದಿಸುತ್ತಾರೆ. ಇದು ಸುಮಾರು ತಿಂಗಳಿಗೆ 7 ಲಕ್ಷ ರೂ.ಗಳಷ್ಟಿರುತ್ತದೆ ಮತ್ತು ಹೆಂಡತಿಯು ಗೃಹಿಣಿಯಾಗಿ ಇರುವುದರಿಂದ ಯಾವುದೇ ಸ್ವತಂತ್ರ ಆದಾಯವನ್ನು ಹೊಂದಿಲ್ಲ ಎಂಬ ಅಂಶವನ್ನು ಕುಟುಂಬ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಜೊತೆಗೆ, ಪತ್ನಿಯ ಮಾನಸಿಕ ಸ್ಥಿತಿಗೆ ಚಿಕಿತ್ಸೆ ಪಡೆಯುವ ಅಗತ್ಯವಿದೆ. ಇದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಬೇಕಾಗಿದೆ. ಆದ್ದರಿಂದ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶ ನ್ಯಾಯಸಮ್ಮತವಾಗಿದೆ ಎಂದು ತಿಳಿಸಿದೆ.
ಅಲ್ಲದೆ, ಹೆಂಡತಿ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ ಮತ್ತು ಅವಳ ಖಿನ್ನತೆಗೆ ಚಿಕಿತ್ಸೆ ಅಗತ್ಯವಿದೆ. ಹೆಂಡತಿಗೆ ಅಗತ್ಯವಿರುವ ಜೀವನಾಂಶ ಪಾವತಿಸುವುದು ಗಂಡನ ಕರ್ತವ್ಯವಾಗಿದೆ. ಪ್ರಸ್ತುತ ಪ್ರಕರಣ ಪತಿಯ ಗಳಿಕೆಯು ತಿಂಗಳಿಗೆ 7 ಲಕ್ಷ ರೂ.ಗಳಾಗಿದೆ, ಪತಿಯು ಹೆಂಡತಿಗೆ ಜೀವನಾಂಶ ಪಾವತಿಸಲಾಗದ ಸ್ಥಿತಿಯಲ್ಲಿ ಇಲ್ಲವೆಂದು ತಿಳಿಸಿದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.