ಕರ್ನಾಟಕ

karnataka

ETV Bharat / state

ಆರ್ಥಿಕ ಹಿಂದುಳಿದವರಿಗೆ ಶೇ.10 ಮೀಸಲಾತಿ ಜಾರಿಗೆ ಕೋರಿ ಅರ್ಜಿ: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್

ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಅನುಷ್ಠಾನದಲ್ಲಿ ವಿಳಂಬ ಸಂಬಂಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ನೀಡಿದೆ.

High Court
ಹೈಕೋರ್ಟ್

By ETV Bharat Karnataka Team

Published : Feb 21, 2024, 5:21 PM IST

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಕುರಿತಂತೆ ಸಂವಿಧಾನಕ್ಕೆ ತಂದಿರುವ 103ನೇ ತಿದ್ದುಪಡಿ ಅನುಸಾರ ಮೀಸಲಾತಿ ಜಾರಿ ಮಾಡುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೊರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

ವಕೀಲ ಗಿರೀಶ್ ಭಾರಧ್ವಜ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜೆ. ಶಿವಶಂಕರೇಗೌಡ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹಾಜರಾಗಿ, ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡಿದೆ. ಇದು ಅನುಷ್ಠಾನಕ್ಕೆ ಬಂದಿಲ್ಲ. ಈ ಸಂಬಂಧ 2024ರ ಜನವರಿ 14ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಗೆ ಮನವಿ ಮಾಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರಿಗೂ, ಈ ವಿಚಾರಕ್ಕೂ ಏನು ಸಂಬಂಧ? ಎಂದು ಪ್ರಶ್ನಿಸಿತು. ಸರ್ಕಾರದ ಕ್ರಮದಿಂದ ತೊಂದರೆಯಾದವರು ಮನವಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಅರ್ಜಿ ವಿಚಾರಣೆಗೆ ಪರಿಗಣಿಸಲಾಗದು ಎಂದು ತಿಳಿಸಿತು.

ಈ ವೇಳೆ ಅರ್ಜಿದಾರ ಪರ ವಕೀಲರು, ಈ ಸೌಲಭ್ಯವನ್ನು ಪಡೆಯಲು ಅರ್ಹರಿರುವವರು ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದು ತಮ್ಮ ವಾದ ಮಂಡಿಸಿದರು. ಆಗ ನ್ಯಾಯಪಪೀಠ, ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ಈ ಅರ್ಜಿ ಸಂಬಂಧ ನೋಟಿಸ್ ಜಾರಿ ಮಾಡಿದಲ್ಲಿ, ಸರ್ಕಾರದ ಅಧಿಕಾರಿಗಳು ತಮ್ಮ ಕೆಲಸಗಳನ್ನು ಬಿಟ್ಟು, ಇತ್ತ ಗಮನ ಹರಿಸಬೇಕಾಗುತ್ತದೆ ಎಂದು ತಿಳಿಸಿತು. ಬಳಿಕ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿತು.

ಅರ್ಜಿಯಲ್ಲಿ ಏನಿದೆ?:ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ನೀಡುವ ಸಂಬಂಧ ಕೇಂದ್ರ ಸರ್ಕಾರ 2019ರ ಜನವರಿ 12ರಂದು 103ನೇ ಸಂವಿಧಾನಕ್ಕೆ ತಿದ್ದುಪಡಿ ತಂದು ಪರಿಚ್ಛೇದ 14 ಮತ್ತು 16(6)ನೇ ವಿಧಿಗೆ ಸೇರ್ಪಡಿಸಿದೆ. ಕೇಂದ್ರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್ ಕೇಂದ್ರದ ಕ್ರಮವನ್ನು ಎತ್ತಿಹಿಡಿದ್ದು, ಈ ನಿರ್ಧಾರಕ್ಕೆ ಸಂವಿಧಾನದ ಮಾನ್ಯತೆ ಸಿಕ್ಕಂತಾಗಿದೆ.

ಆದರೆ, ಸಂವಿಧಾನ ಬದ್ಧವಾಗಿರುವ ಈ ಮೀಸಲಾತಿ ಜಾರಿ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ಆರ್ಥಿಕವಾಗಿ ಹಿಂದುಳಿದಿರುವ ವರ್ಗಕ್ಕೆ ದೊಡ್ಡ ಮಟ್ಟದ ತೊಂದರೆಯಾಗುತ್ತಿದೆ. ರಾಜ್ಯದಲ್ಲಿ ಈ ರೀತಿಯ ವಿಳಂಬದಿಂದ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಸರ್ಕಾರದ ಸೇವೆಗೆ ಸೇರ್ಪಡೆಯಾಗಬಯಸುವವರ ಮೇಲೆ ಪರಿಣಾಮ ಬೀರಲಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿಯನ್ನು ಜಾರಿ ಮಾಡಬೇಕು.

ಜತೆಗೆ, ಕೇಂದ್ರ ಸರ್ಕಾರದ ಈ ನಿರ್ಧಾರ ಆರ್ಥಿಕವಾಗಿವಾಗಿ ಹಿಂದುಳಿದ ಪ್ರತಿಭಾವಂತರಾಗಿದ್ದು ಅರ್ಹರಿರುವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕಾಗುತ್ತದೆ. ಇದರಿಂದಾಗಿ ಈ ವರ್ಗದವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಸುಧಾರಣೆಗೆ ನೆರವಾಗಲಿದೆ. ಆದ್ದರಿಂದ ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದು, ನ್ಯಾಯಪೀಠ ಮಧ್ಯಪ್ರವೇಶ ಮಾಡಬೇಕು. ತಕ್ಷಣ ಮೀಸಲಾತಿ ಸೌಲಭ್ಯಗಳು ಜಾರಿಯಾಗುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಇದನ್ನೂ ಓದಿ:ಜಯಲಲಿತಾರ ಚಿನ್ನಾಭರಣ ಪಡೆಯಲು 6 ಟ್ರಂಕ್​ಗಳೊಂದಿಗೆ ಬರುವಂತೆ ತಮಿಳುನಾಡು ಸರ್ಕಾರಕ್ಕೆ ಕೋರ್ಟ್​ ಸೂಚನೆ

ABOUT THE AUTHOR

...view details