ಬೆಂಗಳೂರು: 2008 ರಿಂದ 2013ರ ಅವಧಿಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ತತ್ಕಾಲ್ ಸೇವೆಗಳ ಅಡಿಯಲ್ಲಿ ಹೆಚ್ಚುವರಿ ಸೇವೆ ಸಲ್ಲಿಸಿರುವ ರಾಜ್ಯ ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆಯಿಂದ ಅನುಮತಿ ಪಡೆದ ಭೂ ಮಾಪಕರಿಗೆ ಮುಂದಿನ ಮೂರು ತಿಂಗಳಲ್ಲಿ ಸಂಭಾವನೆ ಪಾವತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ, ಸಂಭಾವನೆ ಪಾವತಿ ಮಾಡುವ ಪ್ರಕ್ರಿಯೆ ವಿಳಂಬವಾದಲ್ಲಿ ಶೇ.1 ರಷ್ಟು ಬಡ್ಡಿಯೊಂದಿಗೆ ಪಾವತಿ ಮಾಡಬೇಕು. ಈ ಮೊತ್ತವನ್ನು ತಪ್ಪಿತಸ್ಥ ಅಧಿಕಾರಿಗಳಿಂದ ವಸೂಲಿ ಮಾಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.
ಸರ್ಕಾರದಿಂದ ಪರವಾನಿಗೆ ಪಡೆದ ಭೂಮಾಪಕರಾದ ಕೆ.ಬಿ. ಲೋಕೇಶ್ ಸೇರಿ 1,130 ಮಂದಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ರಾಮಚಂದ್ರ ಹುದ್ದಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಜೊತೆಗೆ, ಸರ್ಕಾರ ಆದೇಶದ ಅವಧಿಯಲ್ಲಿ ಅರ್ಜಿ ಸಲ್ಲಿಸಿರುವ ಭೂಮಾಪಕರು ಸೇವೆ ಸಲ್ಲಿಸಿರುವ ಸಂಬಂಧ ಖಚಿತಪಡಿಸಿಕೊಂಡ ಬಳಿಕ ಸಂಭಾವನೆ ಪಾವತಿಸಬೇಕು ಎಂದು ಸೂಚಿಸಿದೆ.
ತತ್ಕಾಲ್‌ನಲ್ಲಿ ಸೇವೆ ಪಡೆದುಕೊಂಡ ಫಲಾನುಭವಿಗಳಿಂದ ಸಂಗ್ರಹಿಸಿರುವ ಮೊತ್ತವನ್ನು ಪರವಾನಿಗೆ ಪಡೆದ ಭೂ ಮಾಪಕರಿಗೆ ಪಾವತಿ ಮಾಡಿಲ್ಲ. ಆದರೆ, ಈ ಮೊತ್ತವನ್ನು ಸರ್ಕಾರದ ಖಜಾನೆಗೂ ಪಾವತಿಸಿಲ್ಲ. ಆದರೆ, ಪ್ರತ್ಯೇಕ ಖಾತೆಯಲ್ಲಿಡಲಾಗಿದೆ. ಸೇವೆ ಸಲ್ಲಿಸಿದ ಭೂ ಮಾಪಕರಿಗೆ ಸಂಭಾವನೆ ಪಾವತಿಸದಿರುವುದು ಸರ್ಕಾರದ ಅನ್ಯಾಯದ ನಡೆಯಾಗಿದೆ ಎಂದು ಪೀಠ ಹೇಳಿದೆ. ಅಲ್ಲದೆ, ಹೆಚ್ಚುವರಿ ಕೆಲಸವನ್ನು ಮಾಡಿಸಿಕೊಂಡಿರುವ ಸರ್ಕಾರ ಅದಕ್ಕೆ ಸಂಭಾವನೆ ನೀಡದಿರುವುದು ಸರಿಯಾದ ಕ್ರಮವಲ್ಲ. ಸೇವಕರ ರಕ್ತ ಮತ್ತು ಬೆವರಿಗೆ ಬೆಲೆ ನೀಡಬೇಕಾಗಿದೆ ಎಂದು ತಿಳಿಸಿದ ನ್ಯಾಯಪೀಠ, ಸಂಭಾವನೆ ಪಾವತಿಗೆ ಸೂಚನೆ ನೀಡಿ ಆದೇಶ ಹೊರಡಿಸಿದೆ.