ಕರ್ನಾಟಕ

karnataka

ETV Bharat / state

ಹಿಡಕಲ್ ಅಲ್ಲಮಪ್ರಭು ದೇವಾಲಯ ಪಾರಂಪರಿಕ ಸ್ಮಾರಕವೇ?: ಪರಿಶೀಲನೆಗೆ ಸಮಿತಿ ರಚಿಸಲು ಹೈಕೋರ್ಟ್ ಸೂಚನೆ - HIDKAL ALLAMA PRABHU TEMPLE

ಹಿಡಕಲ್ ಜಲಾಶಯದಲ್ಲಿರುವ ಅಲ್ಲಮಪ್ರಭು ಸ್ವಾಮಿ ದೇವಾಲಯವು ಪಾರಂಪರಿಕ ಸ್ಮಾರಕವೇ ಎಂಬುದರ ಪರಿಶೀಲನೆಗೆ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

high court
ಹೈಕೋರ್ಟ್ (ETV Bharat)

By ETV Bharat Karnataka Team

Published : Nov 11, 2024, 6:28 PM IST

ಬೆಂಗಳೂರು: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿರುವ ಅಲ್ಲಮಪ್ರಭು ಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದ ಶಾಸನ ಹಾಗೂ ಪಳೆಯುಳಿಕೆಗಳು ಕರ್ನಾಟಕ ಪಾರಂಪರಿಕ ಸ್ಮಾರಕಗಳ ಕಾಯಿದೆ 1961ರನ್ವಯ ಪುರಾತನ ಸ್ಮಾರಕಗಳ ವ್ಯಾಪ್ತಿಗೆ ಬರಲಿದೆಯೇ ಎಂಬ ಬಗ್ಗೆ ನಿರ್ಧರಿಸಲು ತ್ರಿಸದಸ್ಯ ತಜ್ಞರ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಮಹಾರಾಷ್ಟ್ರದ ಕೊಲ್ಲಾಪುರದ ಕಾನೂನು ವಿದ್ಯಾರ್ಥಿನಿ ನಿಖಿಲ್‌ ವಿಠ್ಠಲ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಯನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯನ್ನು ರಚಿಸಬೇಕು. ರಾಜ್ಯ ಸರ್ಕಾರವು ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಮುಂದೂಡಿತು.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ವಾದವೇನು?:ವಿಚಾರಣೆ ವೇಳೆ, ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ್‌ ಕಾಮತ್‌, ''ಅಲ್ಲಮ ಪ್ರಭು ದೇವಾಲಯವನ್ನು ರಾಷ್ಟ್ರೀಯ ಮಹತ್ವದ ಸ್ಮಾರಕ ಎಂದು ಘೋಷಿಸಲಾಗಿಲ್ಲ. ಆದರೆ, ಅದು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಪಳೆಯುಳಿಕೆ ಕಾಯಿದೆ ಅಡಿ ಪ್ರಾಚೀನ ಸ್ಮಾರಕಗಳ ವ್ಯಾಖ್ಯಾನದ ವ್ಯಾಪ್ತಿಗೆ ಒಳಪಡುತ್ತದೆ. ಕೇಂದ್ರದ ಕಾಯಿದೆ ಅಡಿ ಅಲ್ಲಮ ಪ್ರಭು ದೇವಾಲಯವನ್ನು ಪ್ರಾಚೀನ ಸ್ಮಾರಕ ಎಂದು ಘೋಷಿಸಿಲ್ಲವಾದ್ದರಿಂದ ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಥಳಗಳು ಮತ್ತು ಪಳೆಯುಳಿಕೆ ಕಾಯಿದೆ 1961ರ ಅಡಿ ಪರಿಗಣಿಸಬಹುದು'' ಎಂದರು.

ಅರ್ಜಿದಾರರ ಮನವಿ ಏನು?:ಅಲ್ಲಮಪ್ರಭು ಸ್ವಾಮಿ ದೇವಾಲಯವು ಶತಮಾನಕ್ಕೂ ಹಳೆಯದಾಗಿದ್ದು, ಅದನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಬೇಕು. ದೇವಾಲಯವು ವರ್ಷದ ಆರು ತಿಂಗಳು ನೀರಿನಲ್ಲಿ ಮುಳುಗುವುದರಿಂದ ಅದನ್ನು ಬೇರೊಂದು ಸ್ಥಳಕ್ಕೆ ಸ್ಥಳಾಂತರ ಮಾಡಬೇಕು. ದೇವಸ್ಥಾನವನ್ನು 17 ಮತ್ತು18ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಅದು ಪ್ರಾಚೀನ ಸ್ಮಾರಕಗಳ ವ್ಯಾಖ್ಯಾನಕ್ಕೆ ಒಳಪಡುತ್ತದೆ. ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದ ಹಿನ್ನೆಲೆಯಲ್ಲಿ ದೇವಾಲಯವನ್ನು ಪ್ರಾಚೀನ ಸ್ಮಾರಕ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಇದನ್ನೂ ಓದಿ:ಕೆಂಗೇರಿ ಐಷಾರಾಮಿ ಕಾರು ಅಪಘಾತ: ಘಟನೆ ವಿಡಿಯೋ ಸಂಗ್ರಹಕ್ಕೆ ಪೊಲೀಸರಿಗೆ ಹೈಕೋರ್ಟ್ ಸೂಚನೆ

ABOUT THE AUTHOR

...view details