ಬೆಂಗಳೂರು:ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ರಾಜ್ಯದ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಿ ಜಾರಿಗೊಳಿಸಿರುವ 'ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-2022' ಮತ್ತು ಶೇ.60ರಷ್ಟು ಕನ್ನಡ ಬಳಸದ ಸಂಸ್ಥೆಗಳನ್ನು ಮುಚ್ಚುವುದಾಗಿ ತಿಳಿಸಿ 2024ರ ಫೆ.28ರಂದು ಹೊರಡಿಸಿರುವ ಸುತ್ತೋಲೆಯನ್ನು ಪ್ರಶ್ನಿಸಿ ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಟೈಟಾನ್ ಕಂಪನಿ ಲಿಮಿಟೆಡ್ ಮತ್ತು ಪಿವಿಆರ್ ಐನಾಕ್ಸ್ ಲಿಮಿಟೆಡ್ ಮತ್ತಿತರ ಬೃಹತ್ ವಾಣಿಜ್ಯ ಸಂಸ್ಥೆಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚುವುದಾಗಿ (ಸೀಲ್ಡ್ ಡೌನ್) ತಿಳಿಸಿರುವುದು ಕಠಿಣ ಕ್ರಮವಾಗಲಿದೆ. ದಂಡ ಹಾಕುವುದು ಅಥವಾ ಪರವಾನಗಿ ರದ್ದುಪಡಿಸುವ ಕ್ರಮವಾದರೆ ಯೋಚಿಸಬಹುದು. ಆದರೆ, ಸಂಸ್ಥೆಯನ್ನೇ ಮುಚ್ಚುವುದು ಸರಿಯಾದ ಕ್ರಮವಲ್ಲ. ಮೇಲಾಗಿ ಕಾಯ್ದೆ ಮೂಲಕ ನಿಯಮಗಳನ್ನು ಸುತ್ತೋಲೆ ಮೂಲಕ ಜಾರಿಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳನ್ನು ಸೀಲ್ಡೌನ್ ಮಾಡುವಂತಹ ಬಲವಂತದ ಕ್ರಮ ಜರುಗಿಸಬಾರದು. ಉಳಿದಂತೆ ಸುತ್ತೋಲೆಗೆ ಸಂಬಂಧಿಸಿದಂತೆ ಇತರ ಅಂಶಗಳು ಅರ್ಜಿ ಕುರಿತ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಮಧ್ಯಂತರ ಆದೇಶ ನೀಡಿದೆ.
ಅಲ್ಲದೆ, ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-2022 ಅನ್ನು ಯಾವ ದಿನದಿಂದ ಜಾರಿ ಮಾಡಲಾಗಿದೆ ಎಂಬ ಬಗ್ಗೆ ಗೆಜೆಟ್ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ. ಆ ಕುರಿತು ಸರ್ಕಾರ ಮಾಹಿತಿ ನೀಡಬೇಕು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು. ಶೇ.60ರಷ್ಟು ಕನ್ನಡ ಬಳಕೆ ಮಾಡಲು ವಾಣಿಜ್ಯ ಸಂಸ್ಥೆಗಳಿಗೆ ಎಷ್ಟು ದಿನ ಕಾಲಾವಕಾಶ ನೀಡಲಾಗುತ್ತದೆ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಸೂಚನೆ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರ ಕಂಪನಿಗಳ ಪರ ವಕೀಲ ಮನು ಕುಲಕರ್ಣಿ ವಾದ ಮಂಡಿಸಿ, ''ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-2022ರ ಸೆಕ್ಷನ್ 17(6)ಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ತಂದು ರಾಜ್ಯದ ವಾಣಿಜ್ಯ ಸಂಸ್ಥೆಗಳು ತನ್ನ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಬೇಕು ಎಂದು ಸೂಚಿಸಿದೆ. ಈ ನಿಯಮವು ಸಂವಿಧಾನದ ಪರಿಚ್ಛೇದ 345ಕ್ಕೆ ವಿರುದ್ಧವಾಗಿದೆ. ಭಾಷಾ ನೀತಿಯನ್ನು ರೂಪಿಸಿ, ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಖಾಸಗಿ ವ್ಯಕ್ತಿಗಳ ಮೇಲೆ ಭಾಷೆಯನ್ನು ಹೇರಲು ಸಂವಿಧಾನದ ಪರಿಚ್ಛೇದ 345 ನಿರ್ಬಂಧ ಹೇರುತ್ತದೆ. ತಿದ್ದುಪಡಿ ಮಾಡುವ ಮುನ್ನ ಕನ್ನಡ ಬಳಕೆ ಶೇ.50ರಷ್ಟಿತ್ತು. ತಿದ್ದುಪಡಿ ನಂತರ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ ಮಾಡಲಾಗಿದೆ. ಈ ತಿದ್ದುಪಡಿಯ ಸಮರ್ಥನೀಯತೆ ಮತ್ತು ಕಾನೂನುಬದ್ಧತೆಯನ್ನು ನ್ಯಾಯಾಲಯ ಪರಿಶೀಲಿಸಬೇಕಿದೆ'' ಎಂದು ತಿಳಿಸಿದರು.