ಕರ್ನಾಟಕ

karnataka

ETV Bharat / state

ಮನೆಯೂಟ, ಹಾಸಿಗೆಗೆ ದರ್ಶನ್‌ ಮನವಿ; ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಹೈಕೋರ್ಟ್ ಸೂಚನೆ - Actor Darshan Case

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ಗೆ ಮನೆ ಊಟ, ಹಾಸಿಗೆ ಒದಗಿಸಲು ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ.

high court
ದರ್ಶನ್‌, ಹೈಕೋರ್ಟ್ (ETV Bharat)

By ETV Bharat Karnataka Team

Published : Jul 19, 2024, 5:12 PM IST

ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎರಡನೇ ಆರೋಪಿ ನಟ ದರ್ಶನ್ ತೂಗುದೀಪ ಅವರಿಗೆ ಮನೆ ಊಟಕ್ಕೆ ವ್ಯವಸ್ಥೆ ಮಾಡುವ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಹೈಕೋರ್ಟ್ ಸೂಚನೆ ನಿಡಿದೆ. ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ, ಈ ಸೂಚನೆ ನೀಡಿ ಆದೇಶಿಸಿದೆ.

ಅಲ್ಲದೇ, ಅರ್ಜಿಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಶನಿವಾರ ಅರ್ಜಿ ಸಲ್ಲಿಸಬೇಕು. ಈ ಅರ್ಜಿಯನ್ನು ಒಂದು ವಾರದಲ್ಲಿ ಮ್ಯಾಜಿಸ್ಟ್ರೇಟ್ ಕಾನೂನು ಪ್ರಕಾರ ಇತ್ಯರ್ಥ ಮಾಡಬೇಕು ಎಂದು ಸೂಚನೆ ನೀಡಿತು. ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಕೀಲರು ವಾದ ಮಂಡಿಸಿ, ''ಬಂಧೀಖಾನೆ ಕಾಯಿದೆಯ ಪ್ರಕಾರ ಈ ರೀತಿಯ ಪ್ರಕರಣಗಳಲ್ಲಿ ಕೈದಿ ಮೊದಲು ಎಸ್​​ಪಿ, ಐಜಿಪಿಗೆ ಮನವಿ ಮಾಡಬೇಕು. ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು. ಆದರೆ, ಅರ್ಜಿದಾರರು ನೇರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕಾನೂನು ಪಾಲನೆ ಆಗಿಲ್ಲ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಬೇಕು'' ಎಂದು ಕೋರಿದ್ದರು.

ವಿಚಾರಣೆ ವೇಳೆ ದರ್ಶನ್‌ ಪರ ಹಿರಿಯ ವಕೀಲರಾದ ಕೆ.ಎನ್‌. ಫಣೀಂದ್ರ, ''ಕರ್ನಾಟಕ ಬಂಧೀಖಾನೆ ಕಾಯ್ದೆ-1963ರ ಸೆಕ್ಷನ್ 30ರ ಪ್ರಕಾರ ವಿಚಾರಣಾಧೀನ ಕೈದಿ ಮನೆ ಊಟ ಮತ್ತು ಇತ್ಯಾದಿ ಸಲವತ್ತು ಪಡೆಯುವುದಕ್ಕೆ ಯಾವುದೇ ನಿರ್ಬಂಧವಿಲ್ಲ. 2022ರ ಕಾರಾಗೃಹ ಕೈಪಿಡಿಯ ಪ್ಯಾರಾ 295ರಲ್ಲಿ ಹೇಳಿರುವಂತೆ ವಿಚಾರಣಾಧೀನ ಕೈದಿ ಮನೆ ಊಟ, ಹಾಸಿಗೆ, ಊಟದ ಪರಿಕರ ಹಾಗೂ ದಿನಪತ್ರಿಕೆ ಪಡೆಯಲು ಅವಕಾಶವಿದೆ. ಅದರಂತೆ ದರ್ಶನ್‌ ಸಹ ಮನೆಯಿಂದ ಊಟ ಹಾಗೂ ಇನ್ನಿತರ ಸವಲತ್ತು ಪಡೆಯಲು ಅರ್ಹರಿದ್ದಾರೆ'' ಎಂದು ವಾದಿಸಿದರು.

ಸರ್ಕಾರದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಭಾನು ಪ್ರಕಾಶ್‌, ''ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ 5 ಸಾವಿರ ಕೈದಿಗಳು ದಿನವೂ ಊಟ ಮಾಡುತ್ತಿದ್ದಾರೆ. ಬೇರೆ ಯಾವುದೇ ಕೈದಿಗೂ ಫುಡ್ ಪಾಯಿಸನ್‌ ಆಗಿಲ್ಲ. ದರ್ಶನ್‌ ಸಹ ಫುಡ್ ಪಾಯಿಸನ್‌ ಆಗಿರುವ ಬಗ್ಗೆ ವೈದ್ಯರಿಗೆ ಹೇಳಿಲ್ಲ'' ಎಂದು ಆಕ್ಷೇಪಿಸಿದರು.

ಅಂತಿಮವಾಗಿ ನ್ಯಾಯಮೂರ್ತಿಗಳು, ಕರ್ನಾಟಕ ಬಂಧೀಖಾನೆ ಕಾಯ್ದೆ-1963ರ ಸೆಕ್ಷನ್ 30ರ ಅಡಿಯಲ್ಲಿ ಮನೆಯಿಂದ ಊಟ ಪಡೆಯಲು ವಿಚಾರಣಾಧೀನ ಕೈದಿಗೆ ಅವಕಾಶವಿದೆ ಎಂದು ಆದೇಶ ನೀಡಿದರೆ, ಅದು ಎಲ್ಲಾ ಕೈದಿಗಳಿಗೆ ಹಕ್ಕು ಆಗಿಬಿಡುತ್ತದೆ. ವಿಚಾರಣಾಧೀನ ಕೈದಿಗಳಿಗೆ ಮನೆ ಊಟ ಪಡೆಯುವುದು ಮೂಲಭೂತ ಹಕ್ಕಾಗುತ್ತದೆಯೇ ಎಂಬ ಬಗ್ಗೆ ಕಾನೂನುಗಳ ಪರಾಮರ್ಶೆ ಅಗತ್ಯವಿದೆ. ಹೈಕೋರ್ಟ್‌ ನೀಡುವ ತೀರ್ಪು ಇತರೆ ಕೈದಿಗಳಿಗೆ ಅನ್ವಯವಾಗುತ್ತದೆ. ಹಾಗಾಗಿ, ಪ್ರಕರಣದಲ್ಲಿ ನಾನು ಮಧ್ಯಂತರ ಆದೇಶ ನೀಡುವುದಿಲ್ಲ. ಸಂಪೂರ್ಣ ವಾದ ಮಂಡನೆ ಆಲಿಸಿದ ನಂತರವೇ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಅದಕ್ಕೆ ಮತ್ತಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದರು.

ಅರ್ಜಿಯಲ್ಲಿ ಏನಿತ್ತು?: ಕಾರಾಗೃಹದಲ್ಲಿ ನೀಡುತ್ತಿರುವ ಆಹಾರ ಅರ್ಜಿದಾರರಿಗೆ ಸೂಕ್ತ ರೀತಿಯಲ್ಲಿ ಜೀರ್ಣವಾಗುತ್ತಿಲ್ಲ. ಹೀಗಾಗಿ, ಕೆಲವು ದಿನಗಳಿಂದ ಅತಿಸಾರ(ಭೇದಿ)ದಿಂದ ಬಳಲುತ್ತಿದ್ದಾರೆ. ಜೈಲಿನ ಆರೋಗ್ಯಾಧಿಕಾರಿಗಳ ಪರಿಶೀಲನೆ ನಡೆಸಿದ್ದ ಆಹಾರದಲ್ಲಿ ವಿಷಕಾರಿ ಸೂಕ್ಷ್ಮ ಜೀವಿಗಳು ಸೇರಿವೆ ಎಂದು ತಿಳಿಸಿದ್ದಾರೆ. ಜೊತೆಗೆ, ಅರ್ಜಿದಾರರು ತೂಕದಲ್ಲಿಯೂ ಕಡಿಮೆಯಾಗಿದ್ದಾರೆ. ಇದರಿಂದ ಕಾರಾಗೃಹದಲ್ಲಿ ವಿತರಣೆ ಮಾಡುತ್ತಿರುವ ಆಹಾರ ಸೇವನೆ ಮಾಡುವುದಕ್ಕೆ ಸಾಧ್ಯವಾಗದ ಪರಿಸ್ಥಿತಿಗೆ ತಲುಪಿಸಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಹೀಗಾಗಿ, ಮನೆ ಆಹಾರ ತರಿಸಿಕೊಳ್ಳುವುದಕ್ಕೆ ಅವಕಾಶ ನೀಡಬೇಕು ಎಂದು ಜೈಲು ಅಧಿಕಾರಿಗಳಿಗೆ ಈಗಾಗಲೇ ಮೌಖಿಕವಾಗಿ ಮನವಿ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಹೈಕೋರ್ಟ್ ಆದೇಶವಿಲ್ಲದೇ, ಅರ್ಜಿದಾರರ ಕುಟುಂಬಸ್ಥರು ಮನೆಯಲ್ಲಿ ಸಿದ್ಧಪಡಿಸಿದ ಆಹಾರವನ್ನು ಒದಗಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿ ನಿರಾಕರಿಸಿದ್ದಾರೆ. ಅರ್ಜಿದಾರರು ದೊಡ್ಡ ಪ್ರಮಾಣವಾಗಿ ತೂಕ ಕಳೆದುಕೊಳ್ಳುತ್ತಿದ್ದಾರೆ. ಇದೇ ರೀತಿ ಮುಂದುವರೆದಲ್ಲಿ ಆರೋಗ್ಯ ಹದಗೆಡುವ ಸಾಧ್ಯತೆಯಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅಲ್ಲದೇ, ಕರ್ನಾಟಕ ಬಂಧೀಖಾನೆ ಕಾಯಿದೆ 1963 ಸೆಕ್ಷನ್ 30ರ ಪ್ರಕಾರ ವಿಚಾರಣಾಧೀನ ಕೈದಿಗಳು ಜೈಲು ಅಧಿಕಾರಿಗಳ ಹೊರಗಡೆಯಿಂದ ಆಹಾರ, ಬಟ್ಟೆ ಮತ್ತು ಹಾಸಿಗೆಯನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಜೊತೆಗೆ, ಅರ್ಜಿದಾರರು ಅಪರಾಧಿಯಾಗಿಲ್ಲ. ಆದ್ದರಿಂದ, ಊಟ, ಹಾಸಿಗೆ ಪುಸ್ತಕಗಳು ಮತ್ತು ಸುದ್ದಿಪತ್ರಿಕೆಗಳು ಮನೆಯಿಂದ ತರಿಸಿಕೊಂಡಲ್ಲಿ ಸರ್ಕಾರದ ಖಜಾನೆಗೆ ಆಗುವ ವೆಚ್ಚವೂ ಕಡಿಮೆಯಾಗಲಿದೆ. ಅಲ್ಲದೇ, ಅರ್ಜಿದಾರರಿಗೆ ಮನೆ ಆಹಾರ ನೀಡದಿರುವ ಜೈಲು ಅಧಿಕಾರಿಗಳ ಕ್ರಮ ಅಮಾನವೀಯವಾಗಿದ್ದು, ಸಂವಿಧಾನದ ಪರಿಚ್ಛೇದ 21ರ ಬದುಕುವ ಹಕ್ಕು ಉಲ್ಲಂಘಿಸಿದಂತಾಗಲಿದೆ ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಅರ್ಜಿದಾರ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದಂತೆ 12 ದಿನಗಳ ಪೊಲೀಸ್ ವಿಚಾರಣೆ ಎದುರಿಸಿದ್ದಾರೆ. ಆ ಬಳಿಕ ಜೂನ್ 22ರಿಂದ ನ್ಯಾಯಾಂಗ ಬಂಧನ ವಿಧಿಸಿದ್ದ ಕಾರಣ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿದ್ದಾರೆ.

ಇದನ್ನೂ ಓದಿ:ರಾಹುಲ್ ಗಾಂಧಿ ವಿರುದ್ಧ ಅವಹೇಳನಾಕಾರಿ ಹೇಳಿಕೆ; ಭರತ್ ಶೆಟ್ಟಿ ವಿರುದ್ಧದ ಎಫ್​ಐಆರ್​ಗೆ ಹೈಕೋರ್ಟ್ ತಡೆ - Bharat Shetty FIR Stayed by COURT

ABOUT THE AUTHOR

...view details