ಕರ್ನಾಟಕ

karnataka

ETV Bharat / state

ವಾಲ್ಮೀಕಿ ಅಭಿವೃದ್ಧಿ ಹಗರಣ ಕೇಸ್​ ಸಿಬಿಐ ತನಿಖೆಗೆ ನೀಡಲು ಕೋರಿದ್ದ ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್​ - High Court reserved judgment - HIGH COURT RESERVED JUDGMENT

ವಾಲ್ಮೀಕಿ ಅಭಿವೃದ್ಧಿ ಹಗರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ಊರ್ಜಿತ ಕುರಿತಂತೆ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಪೂರ್ಣಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ.

ವಾಲ್ಮೀಕಿ ಅಭಿವೃದ್ಧಿ ಹಗರಣ ಕೇಸ್
ವಾಲ್ಮೀಕಿ ಅಭಿವೃದ್ಧಿ ಹಗರಣ ಕೇಸ್ (ETV Bharat)

By ETV Bharat Karnataka Team

Published : Sep 30, 2024, 9:21 PM IST

ಬೆಂಗಳೂರು:ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿಗಳ ಹಗರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಗೆ ವಹಿಸಬೇಕು ಎಂದು ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ಊರ್ಜಿತ ಕುರಿತಂತೆ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ತೀರ್ಪು ಕಾಯ್ದಿರಿಸಿದ್ದು, ಅಕ್ಟೋಬರ್ 14 ಇಲ್ಲವೇ 15 ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.

ತನಿಖೆಯಲ್ಲಿ ಸಿಬಿಐಗೆ ಅಧಿಕಾರವಿಲ್ಲ:ಅರ್ಜಿಯ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ, ಪ್ರಕರಣವು ರಾಜ್ಯ ಸರ್ಕಾರದ ವ್ಯಾಪ್ತಿಗೆ ಸೇರಿದೆ. ರಾಜ್ಯ ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸುವುದಕ್ಕೆ ಸಂಪೂರ್ಣ ಅಧಿಕಾರವಿದೆ. ರಾಜ್ಯ ಸರ್ಕಾರ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನಿಖಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ಅಧಿಕಾರವಿಲ್ಲ. ಬ್ಯಾಂಕ್‌ ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯ ಸರ್ಕಾರವನ್ನೇ ಆರೋಪಿಯನ್ನಾಗಿಸಿದೆ ಎಂದರು.

ಇಂತಿಷ್ಟು ಮೊತ್ತದ ಹಗರಣಗಳನ್ನು ಸಿಬಿಐ ತನಿಖೆ ನಡೆಸಬೇಕು ಎಂಬ ನಿಯಮವಿದೆ. ಆದರೆ, ರಾಜ್ಯ ಪೊಲೀಸರಿಗೆ ಕೆಲವು ಸೆಕ್ಷನ್‌ಗಳ ಅಡಿ ರಾಜ್ಯ ಸರ್ಕಾರದ ಅಧಿಕಾರವನ್ನು ಹೊರಗಿಡಲಾಗಿದ್ದು, ಸಿಬಿಐಗೆ ನೀಡಲಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಯಾವುದೇ ಆರೋಪ ಕಂಡು ಬಂದಿಲ್ಲ ಎಂಬುದಾಗಿ ಅವರು ಪೀಠಕ್ಕೆ ವಿವರಿಸಿದರು.

ಅಲ್ಲದೇ, ಬ್ಯಾಂಕಿಂಗ್ ನಿಯಂತ್ರಕರು ಹೊರಡಿಸಿರುವ ಸುತ್ತೋಲೆಯ ಪ್ರಕಾರ, ರಾಜ್ಯ ಪೊಲೀಸರು ತನಿಖೆ ನಡೆಸುವ ಅಧಿಕಾರದಿಂದ ದೂರ ಇಡಲಾಗಿಲ್ಲ. ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ತನಿಖೆ ನಡೆಸುವುದು ಬ್ಯಾಂಕ್ ಮೇಲಿನ ದಾಳಿ ಮಾಡಿದಂತಲ್ಲ. ಇದನ್ನು ಕಾನೂನುಬಾಹಿರ ಎಂದು ಹೇಳಲಾಗಿಲ್ಲ. ಅಷ್ಟಕ್ಕೂ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಬ್ಯಾಂಕ್ ಹೈಕೋರ್ಟ್ ಮೆಟ್ಟಿಲೇರುವುದಕ್ಕೆ ಅಧಿಕಾರವಿಲ್ಲ ಎಂದು ವಾದಿಸಿದರು.

ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ನಡೆಸುವುದಕ್ಕೆ ಅಧಿಕಾರವಿಲ್ಲ ಎಂದಾದರೆ, ಸಿಬಿಐಗೆ ಅಧಿಕಾರವಿದೆಯೇ ಎಂಬ ಪ್ರಶ್ನೆ ಎದುರಾಗಲಿದೆ. ಸಿಬಿಐ ಅಧಿಕಾರವನ್ನು ದೆಹಲಿ ವಿಶೇಷ ಪೊಲೀಸ್ ಕಾಯಿದೆಯಡಿ ಪಡೆಯಲಾಗಿದ್ದು, ಈ ಸಂಬಂಧ ಹೊರಡಿಸಿರುವ ಸುತ್ತೋಲೆ ಪ್ರಕರಣವನ್ನು ಸಿಬಿಐ ನಡೆಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಅಧಿಕಾರ ನೀಡಿದಂತೆ ಆಗುವುದಿಲ್ಲ. ಈ ರೀತಿಯ ಪ್ರಕರಣಗಳನ್ನು ಸುಪ್ರೀಂಕೋರ್ಟ್ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ಇದರಲ್ಲಿ ರಾಜ್ಯ Vs ಕೇಂದ್ರ ಎಂದು ಎಲ್ಲಿದೆ ವಿವಾದ:ಈ ವೇಳೆ ನ್ಯಾಯಪೀಠ, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ವಿವಾದ ಎಂಬುದು ಎಲ್ಲಿದೆ ಎಂದು ಪ್ರಶ್ನಿಸಿತು. ಇದಕ್ಕೆ ಆಚಾರ್ಯ, ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ, ಯೂನಿಯನ್ ಬ್ಯಾಂಕ್‌ ಅನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ಅಂಗವಾಗಿರುವ ಸಂಸ್ಥೆಯಾಗಿದೆ. ಅಲ್ಲದೇ, ಅಟಾರ್ನಿ ಜನರಲ್ ಅವರು ಬ್ಯಾಂಕ್​​ ಪ್ರತಿನಿಧಿಸಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಪೀಠ, ಅಟಾರ್ನಿ ಜನರಲ್ ಅವರು, ಬ್ಯಾಂಕ್​ ಅನ್ನು ಪ್ರತಿನಿಧಿಸುತ್ತಿದ್ದಾರೆ, ಪೀಠವನ್ನಲ್ಲ ಎಂದು ತಿಳಿಸಿತು.

ವಾದ ಮುಂದುವರೆಸಿದ ವಕೀಲ ಆಚಾರ್ಯ, ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಪರಿಗಣಿಸಬೇಕಾಗಿದೆ. ಸಿಬಿಐ ವಿಶೇಷ ತನಿಖಾ ಸಂಸ್ಥೆಯಾಗಿದ್ದು, ಅದೇ ಸಂಸ್ಥೆಯಿಂದ ತನಿಖೆ ನಡೆಯಬೇಕು ಎಂಬುದು ಬ್ಯಾಂಕ್ ವಾದವಾಗಿದೆ. ಆದರೆ, ಸಿಬಿಐಗೆ ವಹಿಸಿರುವ ಪ್ರಕರಣಗಳ ವಿಚಾರಣೆ ಎರಡು ಮೂರು ವರ್ಷಗಳ ಕಾಲ ವಿಳಂಬವಾಗುತ್ತಿದೆ. ಬ್ಯಾಂಕ್ ಅಧಿಕಾರಿಗಳಿಗೆ ಶೀಘ್ರ ವಿಚಾರಣೆ ನಡೆಸಬೇಕು ಎಂಬುದು ಮನವಿಯಾಗಿದೆ. ಈ ಸಂಬಂಧ ನಾವು ಸಲ್ಲಿಸಿರುವ ಆಕ್ಷೇಪಣೆಯನ್ನು ಪರಿಗಣಿಸಬೇಕಾಗಿದೆ. ಅಲ್ಲದೇ, ಪ್ರಕರಣ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ವಿವಾದವಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಈ ಸಂಬಂಧ ಪ್ರಕರಣಗಳ ವಿಚಾರಣೆ ನಡೆಸುವುದಕ್ಕೆ ಅಧಿಕಾರವಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸಬೇಕಾಗಿದೆ ಎಂದು ಕೋರಿದರು.

ಪ್ರೊ ರವಿವರ್ಮಕುಮಾರ್​ ವಾದವೇನು?:

ನಿಗಮದ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ್, ಸಿಬಿಐ ಕಾಯಿದೆ ಮೂಲಕ ರಚನೆ ಮಾಡಿ, ಪೊಲೀಸ್ ಠಾಣೆ ಅಧಿಕಾರ ನೀಡಿದ್ದರೂ ಅಧಿಸೂಚನೆ ಹೊರಡಿಸಿದ ಪ್ರಕರಣಗಳನ್ನು ಮಾತ್ರ ಸಿಬಿಐ ತನಿಖೆ ನಡೆಸುವುದಕ್ಕೆ ಅವಕಾಶವಿದೆ. ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಿಲ್ಲ. ಸಿಬಿಐ ಅನ್ನು ಮಾತ್ರ ಪ್ರತಿವಾದಿಯನ್ನಾಗಿಸಿದ್ದು, ಸಿಬಿಐ ಎಂದರೆ ಕೇಂದ್ರ ಸರ್ಕಾರವೇ ಆಗಿದೆ. ಹೀಗಿರುವಾಗ ಬ್ಯಾಂಕ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಬೇಕು ಎಂದು ಕೋರುವುದಕ್ಕೆ ಅವಕಾಶವಿಲ್ಲ ಎಂದರು.

ಅಲ್ಲದೆ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಡಿ ಆರ್‌ಬಿಐ ಕೇಂದ್ರ ಪಟ್ಟಿಯಲ್ಲಿ ಬರಲಿದೆ. ಆರ್‌ಬಿಐ ಹೊರಡಿಸಿರುವ ನಿರ್ದೇಶನವು ಕೇಂದ್ರ ಮತ್ತು ರಾಜ್ಯ ಸರ್ಕಾರ ಬದ್ಧರಾಗಿರಬೇಕಾಗಿಲ್ಲ. ಹೀಗಾಗಿ ಪ್ರಕರಣವನ್ನು ಸುಪ್ರೀಂ ಕೊರ್ಟ್ ವಿಚಾರಣೆ ನಡೆಸಬೇಕಾಗಿದೆ ಎಂದು ಪೀಠಕ್ಕೆ ವಿವರಿಸಿದರು.

ಅರ್ಜಿದಾರರ ಪರ ವಕೀಲರು ಹೇಳಿದ್ದೇನು?:ಅರ್ಜಿದಾರ ಬ್ಯಾಂಕ್‌ನ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಆರ್.ವೆಂಕಟರಮಣಿ, ಪ್ರಕರಣದಲ್ಲಿ ಕೇಂದ್ರ ಸರ್ಕಾರ ನೇರ ಮತ್ತು ಪರೋಕ್ಷವಾಗಿ ಪಕ್ಷಗಾರರಾಗುವುದಿಲ್ಲ. ಒಮ್ಮೆ ಬ್ಯಾಂಕಿನಿಂದ ಸಿಬಿಐಗೆ ದೂರು ಸಲ್ಲಿಕೆಯಾಗಿದ್ದು, ಪ್ರಕರಣ ದಾಖಲಿಸದ ಬಳಿಕ ಸಿಬಿಐ ತನಿಖೆ ಮುಂದುವರೆಸಬಹುದಾಗಿದೆ. ಬ್ಯಾಂಕುಗಳ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವುದಕ್ಕೆ ಸಿಬಿಐಗೆ ಅಧಿಕಾರವಿದೆ ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠ ತೀರ್ಪು ಕಾಯ್ದಿರಿಸಿತು.

ಇದನ್ನು ಓದಿ:' ಕನಿಷ್ಠ ದೇವರನ್ನಾದರೂ ರಾಜಕೀಯದಿಂದ ದೂರವಿಡಿ': ತಿರುಪತಿ ಲಡ್ಡು ವಿವಾದದ ಬಗ್ಗೆ ಸುಪ್ರೀಕೋರ್ಟ್​ ಬೇಸರ - Tirupati laddu row

ABOUT THE AUTHOR

...view details