ಕರ್ನಾಟಕ

karnataka

ETV Bharat / state

ಎನ್​ಇಪಿ ಜಾರಿಗೆ ಸೂಚಿಸಲು ಕೋರಿ ಅರ್ಜಿ: ಪ್ರತಿಕ್ರಿಯಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್ - High Court

ಎನ್​ಇಪಿ ಜಾರಿಗೆ ಸೂಚಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿ ಅರ್ಜಿಯನ್ನು ಆಗಸ್ಟ್​ 1ಕ್ಕೆ ಮುಂದೂಡಿತು.

By ETV Bharat Karnataka Team

Published : Jul 11, 2024, 9:07 PM IST

HIGH COURT
ಹೈಕೋರ್ಟ್ (ETV Bharat)

ಬೆಂಗಳೂರು:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ(ಎನ್​ಇಪಿ)ಯನ್ನು ಅನುಷ್ಠಾನಕ್ಕೆ ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ಪ್ರತಿಕ್ರಿಯಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಗಿರೀಶ್ ಭಾರದ್ವಾಜ್ ಹಾಗೂ ಆರ್. ಆನಂದ ಮೂರ್ತಿ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿತ್ತು. ಈ ಸಂಬಂಧ ರಾಜ್ಯ ಸರ್ಕಾರ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲು ತೀರ್ಮಾನಿಸಿದೆ. ಈ ಮೂಲಕ ಯು-ಟರ್ನ್ ತೆಗೆದುಕೊಂಡಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ತೀವ್ರ ತರದ ತೊಂದರೆಯಾಗಲಿದೆ. ಆದ್ದರಿಂದ ಎನ್​ಇಪಿ ಜಾರಿಗೆ ನಿರ್ದೇಶನ ನಿಡಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಸರ್ಕಾರದ ನೀತಿಗಳ ಕುರಿತುಂತೆ ನಿರ್ದೇಶನ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಅಲ್ಲದೆ, ಅರ್ಜಿದಾರರ ಮನವಿಯನ್ನು ಪರಿಗಣಿಸಬಹುದಾಗಿದೆ. ಆದರೂ, ನಿರ್ದೇಶನ ಹೇಗೆ ಸಾಧ್ಯ?, ಅರ್ಜಿ ಹಿಂಪಡೆಯುವುದು ಸೂಕ್ತ, ಇಲ್ಲವೇ ಇದೊಂದು ಕೊಟ್ಟಿ ಅರ್ಜಿಯಾಗಿದೆ. ಅಲ್ಲದೆ, ಎನ್​ಇಪಿ ನೀತಿ ಜಾರಿ ಮಾಡದಿರುವುದಕ್ಕೂ ಸರ್ಕಾರಕ್ಕೆ ಅದರದ್ದೇ ಆದ ಕಾರಣಗಳು ಇರಲಿವೆ ಎಂದು ಪೀಠ ತಿಳಿಸಿತು.

ಈ ವೇಳೆ ವಕೀಲರು, ಎನ್​ಇಪಿ ದೇಶಾದ್ಯಂತ ಜಾರಿ ಮಾಡುವ ಮೂಲಕ ಒಂದು ದೇಶ ಒಂದು ಶಿಕ್ಷಣ ನೀತಿ ಪರಿಕಲ್ಪನೆಯಾಗಿದೆ. ಈ ಹಿಂದೆ ಇದ್ದ ಸರ್ಕಾರ ಹಂತ ಹಂತವಾಗಿ ಜಾರಿ ಮಾಡುವುದಕ್ಕೆ ನಿರ್ಧಾರ ಮಾಡಿತ್ತು. ಈಗಾಗಲೇ ವಿಶ್ವವಿದ್ಯಾಲಯಗಳು ಎನ್​ಇಪಿ ಶಿಕ್ಷಣ ಪದ್ದತಿಯನ್ನು ಅನುಸರಿಸುತ್ತಿವೆ. ಈಗ ಸರ್ಕಾರ ಬದಲಾವಣೆ ಮಾಡುತ್ತಿದೆ ಎಂದು ಪೀಠಕ್ಕೆ ವಿವರಿಸಿದರು. ಅಂತಿಮವಾಗಿ ನ್ಯಾಯಪೀಠ, ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿ ಅರ್ಜಿಯನ್ನು ಆಗಸ್ಟ್​ 1ಕ್ಕೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ ?:ಭಾರತ ದೇಶ ಜನಾಂಗೀಯವಾಗಿ ವೈವಿಧ್ಯಮಯ ರಾಷ್ಟ್ರಗಳಲ್ಲಿ ಒಂದಾಗಿದೆ. ಇಲ್ಲಿನ ಶಿಕ್ಷಣವೂ ವಿವಿಧ ಹಂತಗಳನ್ನು ಹಾಗೂ ಪ್ರಕಾರಗಳನ್ನು ಒಳಗೊಂಡಿದೆ. ಉದಾಹರಣೆಗೆ ಬಾಲ್ಯ ಶಿಕ್ಷಣ, ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಇತ್ಯಾದಿ. ವಿದ್ಯಾರ್ಥಿಗಳಿಗೆ ಸಮನಾಗಿ ಶಿಕ್ಷಣ ಒದಗಿಸಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಒಂದೇ ತರನಾದ ಚೌಕಟ್ಟು ಮತ್ತು ಮಾರ್ಗಸೂಚಿ ಒದಗಿಸುವುದು ಇದರ ಮುಖ್ಯ ಉದ್ದೇಶ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ 2020ರಲ್ಲಿ ಹೊಸ ಮತ್ತು ಪರಿಷ್ಕೃತ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಂದಿತ್ತು. ಸರ್ಕಾರದ ಆದೇಶ ಅನ್ವಯ 2021ರ ಆ. 7 ರಂದು ರಾಜ್ಯ ವ್ಯಾಪ್ತಿ ಜಾರಿಗೆ ಬಂತು. ರಾಜಕೀಯ ಪಕ್ಷಗಳು ಬದಲಾವಣೆಯಿಂದಾಗಿ ನಮ್ಮಲ್ಲಿ ರಾಷ್ಟ್ರೀಯ ಅನುಷ್ಠಾನವನ್ನು ಹಿಂಪಡೆಯಲು ನಿರ್ಧರಿಸಿದರು. ಜತೆಗೆ ರಾಜ್ಯವೂ ತನ್ನದೇ ಆದ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ನಿರ್ಧರಿಸಿದ್ದು ಈ ಹಿನ್ನೆಲೆ ಶಿಕ್ಷಣ ನೀತಿಯನ್ನು ರೂಪಿಸಲು ಸಮಿತಿ ರಚಿಸಿರುವುದಾಗಿ 2023ರ ಅ.11 ರಂದು ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಿದೆ.

2020ರಲ್ಲಿ ರಾಜ್ಯವೂ ಅನುಷ್ಠಾನ ಮಾಡಿದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸೂಕ್ತ ಕಾರಣವಿಲ್ಲದೇ ಹಿಂಪಡೆಯಲು ನಿರ್ಧರಿಸಿದ್ದರು. ಸರ್ಕಾರದ ಈ ನಿರ್ಧಾರದಿಂದ ವಿಶ್ವವಿದ್ಯಾನಿಲಯಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ, ವಿದ್ಯಾರ್ಥಿಗಳಿಗೆ, ಪೋಷಕರಿಗೆ ಗೊಂದಲ ಉಂಟುಮಾಡಿದೆ. ಜತಗೆ ಇದರಿಂದ ಕ್ರೀಯಾತ್ಮಕ ಮತ್ತು ಸಮಗ್ರ ನೀತಿಯಂದ ವಂಚಿತರಾಗಬುದು. ಈ ಹಿನ್ನೆಲೆ ಸರ್ಕಾರ ರಾಜ್ಯ ಶಿಕ್ಷಣ ನೀತಿಯನ್ನು ಕೈಬಿಟ್ಟು ರಾಷ್ಟ್ರ ಶಿಕ್ಷಣ ನೀತಿಯನ್ನು ಅನುಸರಿಸುವಂತೆ ನಿರ್ದೇಶಿಸಬೇಕು. ಜತೆಗೆ 2023ರ ಅ. 11 ಸರ್ಕಾರ ಈ ಬಗ್ಗೆ ಹೊರಡಿಸಿದ ಆದೇಶ ರದ್ದುಗೊಳಿಸಬೇಕೆಂದು ಮನವಿ ಮಾಡಲಾಗಿದೆ.

ಇದನ್ನೂ ಓದಿ:ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕ ಆರೋಪಿಗಳನ್ನು ಜೈಲಿನಲ್ಲಿರಿಸಲಾಗುವುದಿಲ್ಲ: ಹೈಕೋರ್ಟ್ - High Court

ABOUT THE AUTHOR

...view details